ಜನಸಾಗರೋಪಾದಿಯಲ್ಲಿ ಭಾಗವಹಿಸಲು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ
ಚಿತ್ರದುರ್ಗ: ಒಳ ಮೀಸಲಾತಿ ರೋಸ್ಟರ್ ಹಂಚಿಕೆ ವಿರೋಧಿಸಿ ಮಾರ್ಚ್ 24ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಹೋರಾಟದಲ್ಲಿ ಜನಸಾಗರೋಪಾದಿಯಲ್ಲಿ ಭಾಗವಹಿಸುವಂತೆ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.
ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ರಾಜ್ಯ ಸಮಿತಿ ವತಿಯಿಂದ ಒಳ ಮೀಸಲಾತಿ ರೋಸ್ಟರ್ ಹಂಚಿಕೆಯನ್ನು ವಿರೋಧಿಸಿ ಹಾಗೂ ಹಳೆಯ ನಿಯಮದಂತೆ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗಿದೆ. ಇದರ ಪೂರ್ವಭಾವಿಯಾಗಿ ಭಾನುವಾರ ಚಿತ್ರದುರ್ಗದ ಭೋವಿ ಗುರುಪೀಠದಲ್ಲಿ ನಡೆದ ವಿಭಾಗೀಯ ಮಟ್ಟದ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ವಿವಿಧ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಾಗಮೋಹನ್‌ದಾಸ್ ಆಯೋಗ ಸಂಗ್ರಹಿಸಿರುವ ದತ್ತಾಂಶ ಒಂದು ಸಮುದಾಯದ ವಿರುದ್ಧ ಪೂರ್ವಾಗ್ರಹ ಪೀಡಿತವಾಗಿದೆ ಎಂದು ಹಲವು ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಎಂದು ಅವರು ಹೇಳಿದರು. ಭೋವಿ, ಲಂಬಾಣಿ, ಕೊರಮ ಹಾಗೂ ಕೊರಚ ಸಮುದಾಯಗಳು ಮುಂದುವರೆದಿವೆ ಎಂದು ಆಯೋಗ ಎಲ್ಲಿಯೂ ಹೇಳಿಲ್ಲ. ಸಂಗ್ರಹಿಸಿದ ದತ್ತಾಂಶಕ್ಕೂ ಸರ್ಕಾರಕ್ಕೆ ಸಲ್ಲಿಸಿದ ವರದಿಗೂ ವ್ಯತ್ಯಾಸವಿದೆ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಯ ಸೂಕ್ಷ್ಮ ವಲಯಗಳಿಗೆ ಹಾಗೂ ಅಲೆಮಾರಿ ಸಮುದಾಯಗಳಿಗೆ ನ್ಯಾಯ ದೊರಕಬೇಕು ಎಂದು ಆಗ್ರಹಿಸಿದ ಅವರು, ಎಸ್‌ಸಿಪಿ (ಎಸ್‌ಸಿ ಉಪಯೋಜನೆ – SCSP) ಮತ್ತು ಟಿಎಸ್ಪಿ (ಗಿರಿಜನ ಉಪಯೋಜನೆ – TSP) ಯೋಜನೆಗಳ ಹಣವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಸದೇ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಜೊತೆಗೆ ಜನಸಂಖ್ಯೆಗೆ ಅನುಗುಣವಾಗಿ ಭೋವಿ ಅಭಿವೃದ್ಧಿ ನಿಗಮ ಮತ್ತು ಬಂಜಾರ ಅಭಿವೃದ್ಧಿ ನಿಗಮಗಳಿಗೆ ಅನುದಾನ ನೀಡಬೇಕು ಎಂದು ಹೇಳಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಒಳ ಮೀಸಲಾತಿ ಕುರಿತು ನಡೆಯುತ್ತಿರುವ ಹೋರಾಟ ಹೊಸದೇನಲ್ಲ ಎಂದು ಹೇಳಿದರು. ಹಲವು ವರ್ಷಗಳಿಂದ ಚಳುವಳಿ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದು, ಶಾಸಕರು ಮತ್ತು ಮಂತ್ರಿಗಳ ಮನೆಗಳಿಗೆ ಮುತ್ತಿಗೆ ಹಾಕಿದ ಘಟನೆಗಳೂ ನಡೆದಿವೆ ಎಂದು ವಿವರಿಸಿದರು.
ಭೋವಿ ಮತ್ತು ಬಂಜಾರ ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಮಾರ್ಚ್ 24ರಂದು ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ನಡೆಯಲಿರುವ ಬೃಹತ್ ಹೋರಾಟದಲ್ಲಿ ಭೋವಿ, ಲಂಬಾಣಿ, ಕೊರಮ, ಕೊರಚ ಹಾಗೂ ಅಲೆಮಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ಮಾರ್ಚ್ 27ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನದ ಬಗ್ಗೆ ಸಮುದಾಯದಲ್ಲಿ ಆತಂಕವಿದೆ ಎಂದು ಹೇಳಿದ ಅವರು, ಇದು ಸಮುದಾಯದ ಅಳಿವು–ಉಳಿವಿನ ಪ್ರಶ್ನೆಯಾಗಿರುವುದರಿಂದ ಸರ್ಕಾರ ನಡುಗುವ ರೀತಿಯ ಪ್ರತಿಭಟನೆ ನಡೆಯಬೇಕು ಎಂದು ಹೇಳಿದರು.
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನೇರ್ಲಗುಂಟೆ ರಾಮಪ್ಪ ಮಾತನಾಡಿ, ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಹೋರಾಟದಲ್ಲಿ ಎಲ್ಲರೂ ಭಾಗವಹಿಸಿ ಸರ್ಕಾರಕ್ಕೆ ಸಂದೇಶ ನೀಡಬೇಕು ಎಂದರು. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಸಮುದಾಯಗಳ ಮಹತ್ತರ ಪಾತ್ರವಿದೆ ಎಂದು ಅವರು ಹೇಳಿದರು. 56,432 ಹುದ್ದೆಗಳ ನೇಮಕಾತಿಯಲ್ಲಿ ಅನ್ಯಾಯವಾಗದಂತೆ ಹೋರಾಟ ನಡೆಸಬೇಕೆಂದು ಕರೆ ನೀಡಿದರು.
ಬಂಜಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವನಾಯ್ಕ ಮಾತನಾಡಿ, ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ ಎಂದು ಹೇಳಿದರು. ರೋಸ್ಟರ್ ಪದ್ಧತಿ ಅಪಾಯಕಾರಿ ಆಗಿದ್ದು, ಸಮುದಾಯಗಳಿಗೆ ಹಾನಿಯಾಗುತ್ತಿದೆ ಎಂಬ ಅರಿವು ಮೂಡಿಸುವುದೇ ಹೋರಾಟದ ಉದ್ದೇಶ ಎಂದು ತಿಳಿಸಿದರು.
ಭೋವಿ ಸಮಾಜದ ರಾಜ್ಯಾಧ್ಯಕ್ಷ ಆನಂದ್ ಮಾತನಾಡಿ, ಭೋವಿ, ಲಂಬಾಣಿ, ಕೊರಮ ಮತ್ತು ಕೊರಚ ಸಮುದಾಯಗಳು ಒಂದಾಗಿ ಹೋರಾಟ ಮಾಡಿದರೆ ಮಾತ್ರ ನ್ಯಾಯ ದೊರಕುತ್ತದೆ ಎಂದು ಹೇಳಿದರು.
ಜಿಲ್ಲಾ ಕೊರಮ ಸಮಾಜದ ಅಧ್ಯಕ್ಷ ಕೃಷ್ಣಪ್ಪ, ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ನಾಗೇಂದ್ರನಾಯ್ಕ ಹಾಗೂ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಹಲವು ಮುಖಂಡರು ಮಾತನಾಡಿ, ಮಾರ್ಚ್ 24ರ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಜಾನಾಯ್ಕ, ನಿವೃತ್ತ ನ್ಯಾಯಾಧೀಶ ವೀರಭದ್ರಪ್ಪ, ರಾಘವೇಂದ್ರನಾಯ್ಕ, ಸಿಂಡಿಕೇಟ್ ಸದಸ್ಯ ದಾವಣಗೆರೆಯ ದ್ಯಾಮಣ್ಣ, ಮಂಜುಳ ಬಿ.ಜಯದೇವ, ಆದರ್ಶ ಯಲ್ಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಹೊಸಪೇಟೆ ಮತ್ತು ಹಾವೇರಿ ಜಿಲ್ಲೆಗಳಿಂದ ಭೋವಿ, ಲಂಬಾಣಿ, ಕೊರಮ, ಕೊರಚ ಹಾಗೂ ಅಲೆಮಾರಿ ಸಮುದಾಯದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.




