ಬೆಂಗಳೂರು: ಸುಮಾರು ಏಳು ದಶಕಗಳಿಂದ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದು, ಇದೀಗ ಸಮುದಾಯದ ಮೇಲೆ ಅನ್ಯಾಯ ನಡೆಯುತ್ತಿದೆ ಎಂಬ ಅಸಮಾಧಾನ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಮೌಲಾನ ಮಫ್ತಿ ಸಯ್ಯದ್ ಇಬ್ರಾಹಿಂ ಎಚ್ಚರಿಕೆ ನೀಡಿದ್ದಾರೆ.
ಹಿರಿಯ ನಾಯಕರನ್ನು ಮೂಲೆಗುಂಪು ಮಾಡಿದ ಆರೋಪ
ಮುಸ್ಲಿಂ ಧರ್ಮಗುರುಗಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಉಪ ಚುನಾವಣೆಯ ವೇಳೆ ಕಾಂಗ್ರೆಸ್ ನಾಯಕರು ಸಮುದಾಯದ ಹಿರಿಯ ನಾಯಕರನ್ನು ಕಡೆಗಣಿಸಿ ಮೂಲೆಗುಂಪು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಅಬ್ದುಲ್ ಜಬ್ಬರ್, ನಸೀರ್ ಅಹಮದ್ ಮುಂತಾದವರು ದೇವರಾಜ ಅರಸು ಕಾಲದಿಂದಲೇ ಪಕ್ಷಕ್ಕಾಗಿ ದುಡಿದವರಾಗಿದ್ದು, ಅವರನ್ನು ಗುರಿಯಾಗಿಸುವುದು ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಝಮೀರ್ ಅಹಮದ್ ಖಾನ್ ಗುರಿಯಾಗಿಸುವುದು ಸರಿಯಲ್ಲ
ಮುಂದಿನ ದಿನಗಳಲ್ಲಿ ಜನನಾಯಕರೆಂದು ಪರಿಗಣಿಸಲ್ಪಡುವ ಝಮೀರ್ ಅಹಮದ್ ಖಾನ್ ಅವರನ್ನು ಗುರಿಯಾಗಿಸುವ ಕ್ರಮ ಸರಿಯಲ್ಲ. ಇದರಿಂದ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅವರು ಹೇಳಿದರು.
ಹಿಜಾಬ್ ಮತ್ತು ಮೀಸಲಾತಿ ವಿಚಾರದಲ್ಲಿ ಅಸಮಾಧಾನ
ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷಗಳಾದರೂ ಹಿಜಾಬ್ ಸಮಸ್ಯೆಗೆ ಸ್ಪಷ್ಟ ಪರಿಹಾರ ದೊರಕಿಲ್ಲ. ಜೊತೆಗೆ, ಶೇ.4ರ ಮೀಸಲಾತಿ ಹಿಂತಿರುಗಿಸುವ ವಿಚಾರದಲ್ಲೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
“ಮಕ್ಕಳಿಗೆ ಚಾಕ್ಲೆಟ್ ಕೊಟ್ಟಂತೆ ಸಣ್ಣಸಣ್ಣ ಭರವಸೆಗಳನ್ನು ನೀಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ” ಎಂದು ಕಟುವಾಗಿ ಟೀಕಿಸಿದರು.
“ಕಾಂಗ್ರೆಸ್‌ಗೆ ನಾವು ಬೇಕು, ನಮಗೆ ಕಾಂಗ್ರೆಸ್ ಅಗತ್ಯವಿಲ್ಲ”
ವಿಧಾನಸೌಧದ ಮೂರನೇ ಮಹಡಿಗೆ ಮುಸ್ಲಿಂ ಸಮುದಾಯದ ಬೆಂಬಲದಿಂದಲೇ ನಾಯಕರು ತಲುಪಿದ್ದಾರೆ. ಅದು ಸಿದ್ದರಾಮಯ್ಯ ಇರಬಹುದು ಅಥವಾ ಭವಿಷ್ಯದ ಯಾರೇ ನಾಯಕರು ಆಗಿರಬಹುದು ಎಂದು ಅವರು ಹೇಳಿದರು.
“ಕಾಂಗ್ರೆಸ್‌ಗೆ ಮುಸ್ಲಿಂ ಸಮುದಾಯದ ಅಗತ್ಯವಿದೆ. ಆದರೆ ನಮ್ಮ ಬದುಕು ಕಾಂಗ್ರೆಸ್‌ನ ಮೇಲೆ ಅವಲಂಬಿತವಾಗಿದೆ ಎಂದು ಭಾವಿಸಬೇಡಿ” ಎಂದು ಕಿಡಿಕಾರಿದರು.




