ವಾರ್ಡ್ ನಡಿಗೆ ವೇಳೆ ನಿಯಮ ಉಲ್ಲಂಘನೆ ಪತ್ತೆ – ಬಾರ್‌ಗೆ ಬೀಗ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್‌ಕುಮಾರ್ ಅವರು ಬೆಳಿಗ್ಗೆ 7 ಗಂಟೆಯಲ್ಲೇ ತೆರೆಯಲ್ಪಟ್ಟಿದ್ದ ಬಾರ್‌ನ್ನು ಭೇಟಿ ನೀಡಿ ತಕ್ಷಣವೇ ಮುಚ್ಚಿಸಿದ ಘಟನೆ ಬೆಳಕಿಗೆ ಬಂದಿದೆ.
ಪ್ರತಿದಿನದಂತೆ ವಾರ್ಡ್ ನಡಿಗೆ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ಪ್ರಕಾಶ್‌ನಗರ ಪ್ರದೇಶದಲ್ಲಿ ಬಾರ್ ತೆರೆದಿರುವುದು ಶಾಸಕರ ಗಮನಕ್ಕೆ ಬಂದಿದೆ. ಸಾಮಾನ್ಯವಾಗಿ ಮದ್ಯ ಮಾರಾಟಕ್ಕೆ ನಿಗದಿತ ಸಮಯವಿರುವ ಹಿನ್ನೆಲೆ, ಇಷ್ಟು ಮುಂಜಾನೆ ಬಾರ್ ಕಾರ್ಯನಿರ್ವಹಿಸುತ್ತಿರುವುದು ಶಾಸಕರಿಗೆ ಅಚ್ಚರಿಯಾಯಿತು. ತಕ್ಷಣವೇ ಅವರು ಬಾರ್ ಒಳಗೆ ಪ್ರವೇಶಿಸಿ ಪರಿಶೀಲನೆ ನಡೆಸಿದರು.
ಬಾರ್ ಪರವಾನಗಿ ಪತ್ರಗಳನ್ನು ಪರಿಶೀಲಿಸಿದ ಶಾಸಕ, “ಇಷ್ಟು ಬೆಳಿಗ್ಗೆ ಓಪನ್ ಮಾಡಿದ್ದೇಕೆ? ಇದು ದಿನಸಿ ಅಂಗಡಿಯೇ, ಹೂವಿನ ವ್ಯಾಪಾರವೇ ಅಥವಾ ಹಣ್ಣಿನ ವ್ಯಾಪಾರವೇ? ಹಾಲು, ಹಣ್ಣು, ಹೂವು ಮಾರಾಟ ಮಾಡುವ ಸಮಯದಲ್ಲಿ ಎಣ್ಣೆ ವ್ಯಾಪಾರ ಸರಿಯೇ?” ಎಂದು ಮಾಲೀಕರನ್ನು ಕಠಿಣವಾಗಿ ಪ್ರಶ್ನಿಸಿದರು. ನಿಯಮ ಉಲ್ಲಂಘನೆ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಸ್ಪಷ್ಟಪಡಿಸಿದರು.
ಮದ್ಯ ಮಾರಾಟಕ್ಕೆ ಸರ್ಕಾರ ನಿಗದಿಪಡಿಸಿದ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂದು ತಿಳಿಸಿದ ಶಾಸಕ, ತಕ್ಷಣವೇ ಅಂಗಡಿಯನ್ನು ಮುಚ್ಚುವಂತೆ ಸೂಚಿಸಿದರು. ರಾಜಾಜಿನಗರ ಕ್ಷೇತ್ರದ ವ್ಯಾಪ್ತಿಯ ಪ್ರಕಾಶ್‌ನಗರದಲ್ಲಿರುವ ಪ್ರವೀಣ್ ಬಾರ್‌ಗೆ ಬೀಗ ಹಾಕಲಾಗಿದೆ.
ಈ ಘಟನೆಯ ಮೂಲಕ ಕ್ಷೇತ್ರದಲ್ಲಿ ನಿಯಮ ಪಾಲನೆಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದಂತಾಗಿದೆ.




