ಬೆಂಗಳೂರು: ರಹಸ್ಯ ಮತ್ತು ಆ್ಯಕ್ಷನ್ ಮಿಶ್ರಿತ ಕಥಾಹಂದರದೊಂದಿಗೆ ಸಿದ್ಧವಾಗಿರುವ “ಸಿಂಹಪುರಿಯ ಸಿಂಹ” ಚಿತ್ರದ ಟ್ರೈಲರ್ ಹಾಗೂ ಆಡಿಯೋ ಲಾಂಚ್ ಕಾರ್ಯಕ್ರಮ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಈಗಾಗಲೇ ಬಿಡುಗಡೆಯಾದ ಟೀಸರ್ ಮತ್ತು ಒಂದು ಹಾಡು ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಟ್ರೈಲರ್ ಬಿಡುಗಡೆಯ ನಂತರ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಚಿತ್ರದಲ್ಲಿ ಕೆ. ವೈ. ಮೂರ್ತಿ ನಾಯಕನಾಗಿ ಅಭಿನಯಿಸಿದ್ದು, ನಾಯಕಿಯಾಗಿ ಸೌಜನ್ಯ ಕಾಣಿಸಿಕೊಂಡಿದ್ದಾರೆ. ಖಳನಾಯಕರಾಗಿ ಸುಧೀನ್ ಕುಮ್ಟ ಮತ್ತು ನಿಲೇಶ್ ಗೌಡ ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನೂ ಸಹ ಕಲಾವಿದರಾಗಿ ಶಂಕರ್ ಭಟ್, ಉಮೇಶ್, ಬ್ಯಾಂಕ್ ಜನಾರ್ಧನ್, ಜೂನಿಯರ್ ದ್ವಾರಕೀಶ್, ಪದ್ಮ ವಸಂತಿ, ರೇಖಾ ದಾಸ್, ಪ್ರಸನ್ನ ಹಾಗೂ ಮುತ್ತುರಾಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣವನ್ನು ಕೆ. ವೈ. ಮೂರ್ತಿ ಅವರೇ ನಿರ್ವಹಿಸಿದ್ದಾರೆ. ಛಾಯಾಗ್ರಹಣವನ್ನು ಗುರುದತ್ ಮುಸುರಿ ಮತ್ತು ಮನೋಹರ್ ಮಾಡಿದ್ದಾರೆ. ಸಂಗೀತವನ್ನು ಸಿ.ಎಸ್. ಸತೀಶ್ ಮತ್ತು ಕೃಪಾಕರ್ ನೀಡಿದ್ದು, ಸಂಕಲನವನ್ನು ಅರುಣ್ (ಬೆಂಗಳೂರು ಮೂವೀಸ್) ಮಾಡಿದ್ದಾರೆ. ಸಾಹಸ ದೃಶ್ಯಗಳನ್ನು ಅಲ್ಟಿಮೇಟ್ ಶಿವು ಸಂಯೋಜಿಸಿದ್ದು, ಸಂಭಾಷಣೆಯನ್ನು ಸುದರ್ಶನ್ ರಚಿಸಿದ್ದಾರೆ.
ಚಿತ್ರದಲ್ಲಿನ ಹಾಡುಗಳಿಗೆ ರಾಜೇಶ್ ಕೃಷ್ಣನ್, ಹೇಮಂತ್, ಅನುರಾಧ ಭಟ್, ಪ್ರಿಯಾ ಯಾದವ್ ಮತ್ತು ಸ್ನೇಹ ಪ್ರಿಯ ನಾಗರಾಜ್ ಧ್ವನಿಯಾಗಿದ್ದಾರೆ. ನೃತ್ಯ ಸಂಯೋಜನೆಯನ್ನು ಸಂಧನ್ ರಾಜ್ ಮತ್ತು ರಾಜದೇವ್ ನಿರ್ವಹಿಸಿದ್ದಾರೆ.
ಒಟ್ಟಿನಲ್ಲಿ ರಹಸ್ಯಭರಿತ ಕಥೆಯೊಂದಿಗೆ ತಯಾರಾಗಿರುವ “ಸಿಂಹಪುರಿಯ ಸಿಂಹ” ಚಿತ್ರ ಏಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದ್ದು, ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.




