ಬೆಂಗಳೂರಿನಲ್ಲಿ ಸುರಕ್ಷಾ ಸಂಕಲ್ಪ ಕಾರ್ಯಗಾರ; ಕರ್ನಾಟಕದ 27 ಜಿಲ್ಲೆಗಳು ಹೆಚ್ಚಿನ ಆದ್ಯತೆಯಲ್ಲಿ
ಬೆಂಗಳೂರು: ದೇಶದಲ್ಲಿ ಎಚ್‌ಐವಿ ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, 2027ರ ಡಿಸೆಂಬರ್ 1ರೊಳಗೆ ಎಚ್‌ಐವಿ ನಿಯಂತ್ರಣ ಸಾಧಿಸುವ ಗುರಿ ಹೊಂದಲಾಗಿದೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಮಹಾನಿರ್ದೇಶಕರಾದ ಡಾ. ರಾಕೇಶ್ ಗುಪ್ತಾ ತಿಳಿಸಿದ್ದಾರೆ.
ಬೆಂಗಳೂರುದಲ್ಲಿ ಆಯೋಜಿಸಲಾದ ಸುರಕ್ಷಾ ಸಂಕಲ್ಪ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಮಿಷನ್ ಏಡ್ಸ್ ಸುರಕ್ಷಾ ಯೋಜನೆಯಡಿ ಭಾರತದಲ್ಲಿ ಎಚ್‌ಐವಿ ಸಾಂಕ್ರಾಮಿಕವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರುವ ದಿಶೆಯಲ್ಲಿ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ದೇಶಾದ್ಯಂತ 219 ಜಿಲ್ಲೆಗಳು ಆದ್ಯತೆಯಲ್ಲಿ
ದೇಶಾದ್ಯಂತ ಎಚ್‌ಐವಿ ಸೋಂಕಿನ ಪ್ರಮಾಣ, ರೋಗದ ಹೊರೆ ಹಾಗೂ ಹೆಚ್ಚಿನ ಅಪಾಯದ ಗುಂಪುಗಳ ಆಧಾರದ ಮೇಲೆ 219 ಜಿಲ್ಲೆಗಳನ್ನು ಆದ್ಯತೆಯ ಜಿಲ್ಲೆಗಳೆಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚು
ಕರ್ನಾಟಕದಲ್ಲಿ ಎಚ್‌ಐವಿ ಪ್ರಸ್ತುತತೆ 0.44 ಶೇಕಡಾ ಇದ್ದು, ಇದು ರಾಷ್ಟ್ರೀಯ ಸರಾಸರಿ 0.2 ಶೇಕಡಕ್ಕಿಂತ ಹೆಚ್ಚುವಾಗಿದೆ. ರಾಜ್ಯದಲ್ಲಿ ಸುಮಾರು 2.91 ಲಕ್ಷ ಜನರು ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ. ಪ್ರತಿ ವರ್ಷ ಸುಮಾರು 4,700 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಮಾಹಿತಿ ನೀಡಿದರು.
ರಾಜ್ಯದ 31 ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದರೂ, 27 ಜಿಲ್ಲೆಗಳನ್ನು ಹೆಚ್ಚಿನ ಆದ್ಯತೆಯ ಜಿಲ್ಲೆಗಳೆಂದು ಗುರುತಿಸಲಾಗಿದೆ. ಕಾರವಾರ, ಉಡುಪಿ, ಕೊಪ್ಪಳ ಮತ್ತು ಮಂಡ್ಯ ಜಿಲ್ಲೆಗಳು ಮೊದಲ ಗುರಿಯನ್ನು ಸಾಧಿಸಿದ್ದರೆ, ರಾಯಚೂರು ಮತ್ತು ಚಾಮರಾಜನಗರ ಜಿಲ್ಲೆಗಳು ಎರಡನೇ ಗುರಿಯನ್ನು ಸಾಧಿಸಿವೆ ಎಂದು ಹೇಳಿದರು.
ಗರ್ಭಿಣಿಯರಿಂದ ಮಕ್ಕಳಿಗೆ ಸೋಂಕು ತಡೆಗಟ್ಟಲು ಕ್ರಮ
ಗರ್ಭಿಣಿ ಮಹಿಳೆಯರಿಂದ ಮಕ್ಕಳಿಗೆ ಸೋಂಕು ಹರಡುವುದನ್ನು ತಡೆಯಲು ಜಿಲ್ಲಾ ಆರೋಗ್ಯಾಧಿಕಾರಿಗಳ ಸಹಯೋಗದಲ್ಲಿ ಅಗತ್ಯ ವೈದ್ಯಕೀಯ ಕಿಟ್‌ಗಳನ್ನು ಜಿಲ್ಲಾಮಟ್ಟದಲ್ಲಿ ಲಭ್ಯವಾಗುವಂತೆ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರದ ವಿಶೇಷ ಗಮನ
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ್ ಗುಪ್ತಾ ಅವರು, ರಾಜ್ಯದಲ್ಲಿ ಎಚ್‌ಐವಿ ನಿಯಂತ್ರಣ ಕಾರ್ಯಕ್ರಮಗಳಿಗೆ ಹೊಸ ರೂಪ ನೀಡಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಗಮನಾರ್ಹ ಫಲಿತಾಂಶ ಸಾಧಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸಲಹೆ, ಚಿಕಿತ್ಸೆ ಮತ್ತು ತಡೆ ಕ್ರಮಗಳನ್ನು ಪರಸ್ಪರ ಸಂಯೋಜಿಸುವ ಮೂಲಕ ರೋಗಿಗಳಿಗೆ ನಿರಂತರ ಸೇವೆ ಒದಗಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಜಿಲ್ಲೆಗಳತ್ತ ವಿಶೇಷ ಗಮನ ಹರಿಸಲಾಗುವುದು ಎಂದರು.
ಕಾರ್ಯಾಗಾರದಲ್ಲಿ ಕೆಎಸ್ಎಪಿಎಸ್ ರಾಜ್ಯ ನಿರ್ದೇಶಕರಾದ ಪದ್ಮ ಬಸವಂತಪ್ಪ ಸೇರಿದಂತೆ ವಿವಿಧ ಜಿಲ್ಲೆಗಳ ಅಧಿಕಾರಿಗಳು, ತಮಿಳುನಾಡು ಹಾಗೂ ನಾಗಪುರದ ಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲಾಮಟ್ಟದಲ್ಲಿ ಎಚ್‌ಐವಿ ನಿಯಂತ್ರಣ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಲಾಯಿತು.




