ರಾಜ್ಯದ ಸರ್ಕಾರಿ ಆಸ್ಪತ್ರೆಗಳ ವೈದ್ಯರು, ಅಧಿಕಾರಿ-ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮಾ.11 ರಿಂದ ಹಂತ ಹಂತವಾಗಿ ಮುಷ್ಕರ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ. ರವೀಂದ್ರನಾಥ್ ಎಂ. ಮೇಟಿ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಸರ್ಕಾರಿ ಸೌಕರರ ಸಂಘದ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತವಾಗಿ ಮಾ. 11ರಿಂದ ೧೫ರವರೆಗೆ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳು, ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಡಿಸ್ಪೆನ್ಸರಿಗಳಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕಪುö್ಪಪಟ್ಟಿ ಧರಿಸಿ ಹೊರರೋಗಿಗಳ ಚಿಕಿತ್ಸೆಯನ್ನು ಸ್ಥಗಿತಗೊಳಿಸಲಿದ್ದಾರೆ. ಆದರೆ, ತುರ್ತು ಚಿಕಿತ್ಸಾ ಸೇವೆಗಳು ಎಂದಿನAತೆ ಮುಂದುವರಿಯಲಿದೆ. ರಾಜ್ಯ ಸರ್ಕಾರ ಮಾ. ೧೫ರ ಒಳಗಾಗಿ ಬೇಡಿಕೆ ಈಡೇರಿಸದಿದ್ದರೆ, 2ನೇ ಹಂತದಲ್ಲಿ ಮಾ.೧೬ ರಿಂದ ಬೇಡಿಕೆಗಳು ಈಡೇರುವವರೆಗೂ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಮತ್ತು ಅಧಿಕಾರಿ-ನೌಕರರು ಅನಿರ್ದಿಷ್ಟಾವಧಿಗೆ ಕರ್ತವ್ಯಕ್ಕೆ ಗೈರುಹಾಜರಾಗುವ ಮೂಲಕ ಮುಷ್ಕರ ಮುಂದುವರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಕೊರತೆ ಉಂಟಾಗಿದೆ. ಐವಿ ಫ್ಲೋಯಿಡ್, ಆಂಟಿಬಯೋಟಿಕ್ಸ್ ಸೇರಿದಂತೆ ಹಲವಾರು ಮುಖ್ಯ ಔಷಧಿಗಳು ಲಭ್ಯವಿಲ್ಲದೆ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಚೀಟಿ ಬರೆಯಬಾರದು ಎಂಬ ನಿಯಮವಿದ್ದರೂ, ಔಷಧಿ ಇಲ್ಲದಿದ್ದರೆ ರೋಗಿಗೆ ಚಿಕಿತ್ಸೆ ನೀಡುವುದು ಹೇಗೆ ಎಂಬುದೇ ಪ್ರಶ್ನೆಯಾಗಿದೆ. ಔಷಧಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಸರಬರಾಜಿನಲ್ಲಿ ಅಸಮರ್ಪಕತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.
ತಾಲೂಕು ಮಟ್ಟದಲ್ಲಿ ೨೪*೭ ತಾಯಿ-ಮಗು ಆರೋಗ್ಯ ಸೇವೆಗಾಗಿ ಸರ್ಕಾರ ಅರವಳಿಕೆ ತಜ್ಞ, ಗೈನಕಾಲಜಿಸ್ಟ್ ಮತ್ತು ಪೀಡಿಯಾಟ್ರಿಶಿಯನ್ ಮೂರು ಮಂದಿ ವೈದ್ಯರು ಕಡ್ಡಾಯವಾಗಿರಬೇಕು ಎಂದು ಹೇಳುತ್ತದೆ. ಆದರೆ ಅನೇಕ ಕಡೆಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿ ಇಲ್ಲಿಯವರೆಗೂ ನಿಯೋಜನೆಗೊಂಡಿಲ್ಲ. ಸರ್ಕಾರ ತಾಯಿ ಮರಣ ಪ್ರಮಾಣ ಕಡಿಮೆ ಮಾಡಲು ತಂಡ ರಚಿಸಿದ್ದು, ಅದರಲ್ಲಿ ಯಾವುದೇ ವೈದ್ಯಾಧಿಕಾರಿಗಳು ಇಲ್ಲದೇ ಕೇವಲ ಐಎಎಸ್ ಅಧಿಕಾರಿಗಳಿಂದ ಕೂಡಿದೆ. ವೈದ್ಯರು ಮುಷ್ಕರಕ್ಕೆ ಹೋದಾಗ ಸರ್ಕಾರ ನೇಮಿಸಿರುವ ಅಧಿಕಾರಿಗಳೇ ಅಪರೇಷನ್ ಮಾಡುವುದರ ಮೂಲಕ ಕಾರ್ಯನಿರ್ವಹಿಸಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಿ ಬಳ್ಳಾರಿ, ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ಗಿರಿಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರು ತಮ್ಮ ದೀರ್ಘಕಾಲೀನ ಬೇಡಿಕೆಗಳು ಈಡೇರಿಸದ ಹಿನ್ನೆಲೆಯಲ್ಲಿ ಹೋರಾಟದ ದಿಕ್ಕಿನಲ್ಲಿ ಸಾಗುತ್ತಿದ್ದಾರೆ. ಮಾ.೧೧ ರಿಂದ ಹಂತ ಹಂತವಾಗಿ ಮುಷ್ಕರ ನಡೆಸಿ, ಬಳಿಕ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು. ಆರೋಗ್ಯ ಇಲಾಖೆಯಲ್ಲಿ ಸುಮಾರು ೬೫ ರಿಂದ ೭೫ ಸಾವಿರ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಈ ಇಲಾಖೆ ರಾಜ್ಯದ ಪ್ರಮುಖ ವಿಭಾಗವಾಗಿದ್ದು, ಬಡವರು ಹಾಗೂ ಶ್ರಮಿಕ ವರ್ಗಕ್ಕೆನೇರ ಆರೋಗ್ಯ ಸೇವೆ ಒದಗಿಸುತ್ತದೆ. ಇಂತಹ ಇಲಾಖೆಯ ನೌಕರರ ಸಮಸ್ಯೆಗಳು ಹಲವು ವರ್ಷಗಳಿಂದ ಬಾಕಿ ಉಳಿದಿರುವುದು ವಿಷಾದನೀಯ.
ಸಿ.ಎಸ್. ಷಡಾಕ್ಷರಿ,
ರಾಜ್ಯಾಧ್ಯಕ್ಷ, ಸರ್ಕಾರಿ ನೌಕರರ ಸಂಘ
- ಬೇಡಿಕೆಗಳು
- ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕ ಔಷಧಿ ಸರಬರಾಜು
- ೧೯೭೩ರಿಂದ ತಿದ್ದುಪಡಿ ಮಾಡದಿರುವ ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ
- ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ನಿಯಮಿತವಾಗಿ ಪ್ರಕಟಿಸುವುದು
- ಕಳೆದ ೫ ವರ್ಷಗಳಿಂದ ಬಾಕಿ ಇರುವ ಮುಂಬಡ್ತಿ ನೀಡವುದು
- ಸೇವಾನಿರತ ವೈದ್ಯರು ಮತ್ತು ಸಿಬ್ಬಂದಿಗೆ ಉನ್ನತ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಬೇಕು
- ಅವೈಜ್ಞಾನಿಕ ಕೌನ್ಸಿಲಿಂಗ್ ವರ್ಗಾವಣೆಗಳನ್ನು ನಿಲ್ಲಿಸಿ, ವರ್ಗಾವಣೆ ಕಾಯ್ದೆಯ ನ್ಯೂನತೆಗಳನ್ನು ಸರಿಪಡಿಸುವುದು.
- ಸ್ವಾಯತ್ತ ಸಂಸ್ಥೆಗಳು, ಆಹಾರ ಸುರಕ್ಷತೆ ಇಲಾಖೆ, ಮಹಾನಗರ ಪಾಲಿಕೆಗಳ ಎನ್-ಕೇಡರ್ ಹುದ್ದೆಗಳಿಗೆ ಆರೋಗ್ಯ ಇಲಾಖೆಯ
- ಸಿಬ್ಬಂದಿಯನ್ನೇ ನಿಯೋಸುವುದು
- ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ಹುದ್ದೆಗಳ ಭರ್ತಿ
- ಗುತ್ತಿಗೆ ಹಾಗೂ ಎನ್‌ಎಚ್‌ಎಂ ನೌಕರರಿಗೆ ಸೇವಾ ಭದ್ರತೆ ಮತ್ತು ವೇತನ ಹೆಚ್ಚಳ
- ಕೇಂದ್ರ ಪುರಸ್ಕöÈತ ಯೋಜನೆ ಅಡಿ ಕಾರ್ಯನಿರತ ೬೦೦೦ ನೌಕರರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲೇ ವೇತನ ಭತ್ಯೆ
- ವೈದ್ಯರು, ತಜ್ಞವೈದ್ಯರು ಹಾಗೂ ಸಿಬ್ಬಂದಿಗೆ ಸಿಜಿಎಚ್‌ಎಸ್/ಎಐಸಿಟಿಇ ಮಾದರಿಯಲ್ಲಿ ವೇತನ ನೀಡವುದು




