ಬೆಂಗಳೂರು: ದಲಿತ ಸಮುದಾಯ ಆಳುವ ವರ್ಗವಾಗಬೇಕೆಂಬ ಉದ್ದೇಶದಿಂದ ದಲಿತ ಮುಖ್ಯಮಂತ್ರಿ ಹೋರಾಟಕ್ಕೆ ಚಾಲನೆ ನೀಡುವ ನಿಟ್ಟಿನಲ್ಲಿ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಆಯೋಜಿಸಲಾಗಿದೆ ಎಂದು ದಲಿತ ಚಿಂತಕರ ಚಾವಡಿ (Dalit Intellectuals Forum) ತಿಳಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಪ್ರತಿನಿಧಿಗಳು, ಮಾರ್ಚ್ 16ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ “ಆಳುವ ವರ್ಗವಾಗಲು ದಲಿತ ಜನಾಂಗಗಳು ಎದುರಿಸುತ್ತಿರುವ ಇಂದಿನ ಸವಾಲುಗಳು ಮತ್ತು ಪರಿಹಾರದ ಮುಂದಿನ ಮಾರ್ಗ” ಎಂಬ ವಿಷಯದ ಕುರಿತು ರಾಜ್ಯಮಟ್ಟದ ವಿಚಾರಸಂಕಿರಣವನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ಖ್ಯಾತ ಸಾಹಿತಿ ಹಾಗೂ ಮಾಜಿ ಸಚಿವೆ ಡಾ. ಬಿ.ಟಿ. ಲಲಿತಾ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಂಬೇಡ್ಕರ್ ವಾದಿ ಚಿಂತಕರಾದ ಪ್ರೊ. ಎಂ. ನಾರಾಯಣಸ್ವಾಮಿ ಆಶಯ ಭಾಷಣ ಮಾಡುವರು. ಕಾರ್ಯಕ್ರಮಕ್ಕೆ ಬರಹಗಾರ್ತಿ ಇಂದಿರಾ ಕೃಷ್ಣಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ವಿಚಾರಸಂಕಿರಣದಲ್ಲಿ ನಾಡಿನ ಹಿರಿಯ ದಲಿತ ಚಿಂತಕರಾದ ಡಾ. ಹೆಚ್.ಆರ್. ಸುರೇಂದ್ರ, ಪ್ರೊ. ಎಂ. ನಾರಾಯಣಸ್ವಾಮಿ, ಬಾನಾಂದೂರು ಕೆಂಪಯ್ಯ, ಅಪ್ಪಿಗೆರೆ ತಿಮ್ಮರಾಜಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್, ವಡ್ಡಗೆರೆ ನಾಗರಾಜಯ್ಯ, ಸುಬ್ಬು ಹೊಲೆಯಾರ್, ಡಾ. ಹೊನ್ನುಸಿದಾರ್ಥ, ಪ್ರೊ. ಹು.ಮು. ನಾರಾಯಣಸ್ವಾಮಿ, ಶಿವರಾಂ ದೊಡ್ಡಿ, ಪ್ರೊ. ರಘುಪತಿ, ಲೋಹಿತ್, ಪ್ರೊ. ಭೀಮ್ ಶಾ ಆರ್ಯ, ಡಾ. ಸುರೇಶ್ ಗೌತಮ್, ಹ.ರಾ. ಮಹೇಶ್, ಮೈಸೂರಿನ ಸಿ. ಹರಕುಮಾರ್, ಬಂಗವಾದಿ ನಾರಾಯಣಪ್ಪ, ಕಂದೆಗಾಲ ಶಿವಣ್ಣ, ಬೀದರ್‌ನ ಮಹೇಶ್ ಭಯ್ಯ, ಡಾ. ಸಮತಾ ದೇಶಾಮಾನ, ಗಂಗಾರಾಮ್ ಚಂಡಾಳ, ಶಾಂತಕುಮಾರಿ, ಮು. ತಿಮ್ಮಯ್ಯ ಸೇರಿದಂತೆ ಅನೇಕ ದಲಿತ ಚಿಂತಕರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
ದಲಿತ ಸಂಘಟನೆಗಳ ರಾಜ್ಯ ಮಟ್ಟದ ಮುಖಂಡರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಮುಂದಿನ ಹೋರಾಟದ ಬಗ್ಗೆ ಒಕ್ಕೊರಲಿನ ನಿರ್ಣಯವನ್ನು ಮಂಡಿಸಿ ಅನುಮೋದಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಈ ವಿಚಾರಸಂಕಿರಣದ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಕಟಿಸಲು ಸಂಘಟಕರು ಮನವಿ ಮಾಡಿದ್ದಾರೆ.




