ಬೆಂಗಳೂರು: “ಭಾರತದ ಸರ್ವೋಚ್ಚ ನ್ಯಾಯಾಲಯವು ‘ಸಮಾಧಾನ ಸಮಾರೋಹ’ (SAMADHAN SAMAROH) ಕಾರ್ಯಕ್ರಮವನ್ನು ಆಯೋಜಿಸಿದ್ದು, ಬಾಕಿ ಇರುವ ಸೂಕ್ತ ಪ್ರಕರಣಗಳನ್ನು ಪರಸ್ಪರ ಸಮ್ಮತಿಯ ಮೂಲಕ ಸೌಹಾರ್ದಯುತವಾಗಿ ಪರಿಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ” ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ನ್ಯಾಯಮೂರ್ತಿ ದೇವದಾಸ್ ಹಾಗೂ ಕಾರ್ಯನಿರ್ವಹಕ ಅಧ್ಯಕ್ಷೆಯಾದ ನ್ಯಾಯಮೂರ್ತಿ ಅನು ಶಿವರಾಮನ್ ತಿಳಿಸಿದರು.
ಯೋಜನೆ ವಿವರ
“‘ಸಮಾಧಾನ ಸಮಾರೋಹ’ ಎಂದರೆ ರಾಷ್ಟ್ರದಾದ್ಯಂತ ಮಧ್ಯಸ್ಥಿಕೆ ಆಧಾರಿತ ತೀರ್ಪು ಮತ್ತು ವಿವಾದಗಳ ಸೌಹಾರ್ದಪೂರ್ಣ ಸಮನ್ವಯಕ್ಕಾಗಿ ಸರ್ವೋಚ್ಚ ನ್ಯಾಯಾಲಯ ಕೈಗೊಳ್ಳುವ ಕ್ರಮವಾಗಿದೆ. ಈ ಉಪಕ್ರಮ 2026ರ ಏಪ್ರಿಲ್ 21ರಿಂದ ಆರಂಭವಾಗಿ, ಆಗಸ್ಟ್ 21, 22 ಮತ್ತು 23ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಶೇಷ ಲೋಕ ಅದಾಲತ್ ಮೂಲಕ ಸಮಾಪ್ತಿಯಾಗಲಿದೆ” ಎಂದು ಹೇಳಿದರು.
ಕರ್ನಾಟಕಕ್ಕೆ 4,328 ಪ್ರಕರಣಗಳು
“ಸರ್ವೋಚ್ಚ ನ್ಯಾಯಾಲಯವು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಒಟ್ಟು 4,328 ಪ್ರಕರಣಗಳನ್ನು ಪೂರ್ವ ಸಮಾಧಾನ ಪ್ರಕ್ರಿಯೆಗೆ ಗುರುತಿಸಿದೆ. ಈ ಪ್ರಕರಣಗಳನ್ನು ಜಿಲ್ಲಾವಾರು ವಿಂಗಡಿಸಿ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳಿಗೆ ಕಳುಹಿಸಲಾಗಿದೆ” ಎಂದು ತಿಳಿಸಿದರು.
ಸರ್ಕಾರದ ಪಾತ್ರ
“937ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಸರ್ಕಾರವೇ ಪಕ್ಷವಾಗಿದೆ. ಈ ಪ್ರಕರಣಗಳ ಇತ್ಯರ್ಥಕ್ಕೆ ಸರ್ಕಾರ ಮುಂದಾಗಬೇಕಿದ್ದು, ಈ ಸಂಬಂಧ ಅಡ್ವಕೇಟ್ ಜನರಲ್ ಅವರೊಂದಿಗೆ ಸಭೆ ನಡೆಸಲಾಗಿದೆ. ಈ ವಿಶೇಷ ಲೋಕ ಅದಾಲತ್ ಯಶಸ್ವಿಯಾಗಲು ಸರ್ಕಾರದ ಸಂಪೂರ್ಣ ಸಹಕಾರ ಅಗತ್ಯ” ಎಂದು ಹೇಳಿದರು.
ಪ್ರಕರಣಗಳ ವಿಭಾಗ
ಪೂರ್ವ ಲೋಕ ಅದಾಲತ್ ಸಭೆಗಳಿಗಾಗಿ ಗುರುತಿಸಲಾದ ಪ್ರಕರಣಗಳು:
- ಬ್ಯಾಂಕಿಂಗ್
- ನಾಗರೀಕ ಕಾನೂನು
- ಪರಿಹಾರ ಪ್ರಕರಣಗಳು
- ಗ್ರಾಹಕ ವ್ಯಾಜ್ಯಗಳು ಮತ್ತು ರೇರಾ
- ಕ್ರಿಮಿನಲ್ ಪ್ರಕರಣಗಳು
- ಕೌಟುಂಬಿಕ ವಿವಾದಗಳು
- ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳು
- ಭೂಸ್ವಾಧೀನ ಮತ್ತು ಪುನರ್ವಸತಿ
- ಆಸ್ತಿ ತೆರಿಗೆ
- ಬಾಡಿಗೆ ನಿಯಂತ್ರಣ ಮತ್ತು ಸಾರ್ವಜನಿಕ ಆವರಣ ಕಾಯ್ದೆ
- ಸೇವಾ ಕಾನೂನುಗಳು
- ವರ್ಗಾವಣೆ ಅರ್ಜಿಗಳು
ಕಾರ್ಯವಿಧಾನ (SOP) ಮತ್ತು ಹಂತಗಳು
“ಪ್ರಮಾಣಿತ ಕಾರ್ಯವಿಧಾನ (SOP) ಎಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಕಳುಹಿಸಲಾಗಿದೆ. ಪ್ರಕ್ರಿಯೆ ಮೂರು ಹಂತಗಳಲ್ಲಿ ನಡೆಯಲಿದೆ:
- ಪ್ರಾಥಮಿಕ ಹಂತ
- ಒಳಸೇರಿಸುವ/ದಾಖಲಾತಿ ಹಂತ
- ಅಂತಿಮ ಹಂತ
ಉಚ್ಚ ನ್ಯಾಯಾಲಯದ ವಲಯವಾರು ವಿಭಾಗವೂ ಮಾಡಲಾಗಿದೆ” ಎಂದು ವಿವರಿಸಿದರು.
ಪೂರ್ವ ಸಮಾಧಾನ ಪ್ರಕ್ರಿಯೆ
“ನೋಟೀಸ್ ಜಾರಿಯಾದ ನಂತರ ಪೂರ್ವ ಸಮಾಧಾನ ಪ್ರಕ್ರಿಯೆಗಳು ಜಿಲ್ಲಾ/ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರಗಳಲ್ಲಿ ಭೌತಿಕ ಅಥವಾ ವರ್ಚುವಲ್ ವಿಧಾನದಲ್ಲಿ ನಡೆಯಲಿದೆ. ಮಧ್ಯಸ್ಥಿಕೆದಾರರು, ಪ್ಯಾನಲ್ ವಕೀಲರು ಮತ್ತು ಸಮನ್ವಯಕರರನ್ನು ಬಳಸಿಕೊಳ್ಳಲಾಗುತ್ತದೆ” ಎಂದು ಹೇಳಿದರು.
“ನೋಟೀಸ್ ಪಡೆದ ಪಕ್ಷಗಾರರು ತಮ್ಮ ವ್ಯಾಪ್ತಿಯ ತಾಲ್ಲೂಕು ಅಥವಾ ಜಿಲ್ಲಾ ಕಚೇರಿಯಲ್ಲಿ ನಡೆಯುವ ಪೂರ್ವ ರಾಜೀ ಸಂಧಾನ ಸಭೆಗಳಿಗೆ ಖುದ್ದಾಗಿ ಹಾಜರಾಗಬೇಕು” ಎಂದು ಮನವಿ ಮಾಡಿದರು.
ಇತರ ರಾಜ್ಯಗಳೊಂದಿಗೆ ಸಂಯೋಜನೆ
“ಪಕ್ಷಗಾರರು ಇತರ ರಾಜ್ಯಗಳಲ್ಲಿ ವಾಸಿಸುತ್ತಿದ್ದರೆ, ವಿಡಿಯೋ ಕಾನ್ಫರೆನ್ಸ್ ಮೂಲಕ ಪೂರ್ವ ಸಮಾಧಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಇತರೆ ರಾಜ್ಯಗಳ ಕಾನೂನು ಸೇವೆಗಳ ಪ್ರಾಧಿಕಾರಗಳೊಂದಿಗೆ ಸಂಯೋಜನೆ ಮಾಡಲಾಗಿದೆ” ಎಂದು ತಿಳಿಸಿದರು.
ಕಾರ್ಯಯೋಜನೆ ಸಿದ್ಧ
“ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು ಮತ್ತು ಉಚ್ಚ ನ್ಯಾಯಾಲಯ ಕಾನೂನು ಸೇವಾ ಸಮಿತಿಗಳು ಅನುಸರಿಸಬೇಕಾದ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಈಗಾಗಲೇ ಕಳುಹಿಸಲಾಗಿದೆ” ಎಂದು ಹೇಳಿದರು.
ಆನ್‌ಲೈನ್ ಅರ್ಜಿ ಮತ್ತು ವೆಬ್‌ಸೈಟ್
“ಪಕ್ಷಗಾರರು ಹಾಗೂ ಅವರ ವಕೀಲರುಗಳು ಸರ್ವೋಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ https://www.sci.gov.in/ ನಲ್ಲಿ ಲಭ್ಯವಿರುವ ಗೂಗಲ್ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ತಮ್ಮ ವಿನಂತಿಯನ್ನು ಸಲ್ಲಿಸಬಹುದು.
ಗೂಗಲ್ ಫಾರ್ಮ್ ಲಿಂಕ್: https://forms.gle/jqxefqF4BCWzukoP6 ಎಂದು ನ್ಯಾಯಮೂರ್ತಿ ದೇವದಾಸ್ ತಿಳಿಸಿದ್ದಾರೆ.
ಜಾಗೃತಿ ಅಗತ್ಯ
“ರಾಜ್ಯದಾದ್ಯಂತ ವ್ಯಾಪಕ ಜಾಗೃತಿ ಮೂಡಿಸಲು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಹೆಚ್ಚಿನ ಪ್ರಚಾರ ನೀಡಬೇಕು. ಟಿವಿ ಚಾನಲ್‌ಗಳು ಸುದ್ದಿಚಕ ಹಾಗೂ ಕಿರುಚಿತ್ರಗಳ ಮೂಲಕ, ರೇಡಿಯೋ ಚಾನಲ್‌ಗಳು ಆಗಾಗ ಪ್ರಸಾರ ಮಾಡುವ ಮೂಲಕ ಈ ಮಾಹಿತಿ ಜನರಿಗೆ ತಲುಪಿಸಬೇಕು” ಎಂದು ಮನವಿ ಮಾಡಿದರು.
ಜನರಿಗೆ ಮಹತ್ವದ ಅವಕಾಶ
“ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಸಾವಿರಾರು ಪ್ರಕರಣಗಳನ್ನು ತ್ವರಿತವಾಗಿ ಪರಿಹರಿಸಿಕೊಳ್ಳಲು ಇದು ಜನರಿಗೆ ದೊರೆತಿರುವ ಮಹತ್ವದ ಅವಕಾಶ. ಇದರಿಂದ ಸಮಯ, ಹಣ ಮತ್ತು ಪರಸ್ಪರ ಸಂಬಂಧಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶಶಿಧರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.




