ಧ್ಯಾನ ಮಂದಿರ ಉದ್ಘಾಟನೆ, ರಾಷ್ಟ್ರವ್ಯಾಪಿ ಸೇವಾ ಯೋಜನೆಗಳಿಗೆ ಚಾಲನೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮೇ 10 ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ 45ನೇ ವರ್ಷದ ಸಂಭ್ರಮ ಹಾಗೂ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರ 70ನೇ ಜನ್ಮದಿನೋತ್ಸವ ಅಂಗವಾಗಿ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರಕ್ಕೆ ಆಗಮಿಸಿ ಭವ್ಯ ಕಾರ್ಯಕ್ರಮದಲ್ಲಿ ಭಾಗಿ ಆಗಿದರು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅತ್ಯಾಧುನಿಕ ಹಾಗೂ ವಿಶಾಲವಾದ “ಧ್ಯಾನ ಮಂದಿರ” (Dhyan Mandir) ವನ್ನು ಉದ್ಘಾಟಿಸಿದರು. ವಿಶ್ವದ ಅತಿ ದೊಡ್ಡ ಸಮೂಹ ಧ್ಯಾನ ಕೇಂದ್ರಗಳಲ್ಲಿ ಒಂದಾಗಿ ರೂಪುಗೊಂಡಿರುವ ಈ ಧ್ಯಾನ ಮಂದಿರದಲ್ಲಿ ವಿವಿಧ ದೇಶಗಳು, ಸಂಸ್ಕೃತಿಗಳು ಮತ್ತು ಹಿನ್ನೆಲೆಯ ಲಕ್ಷಾಂತರ ಜನರು ಧ್ಯಾನ ಹಾಗೂ ಪ್ರಾರ್ಥನೆಯ ಮೂಲಕ ಆಂತರಿಕ ಶಾಂತಿಯನ್ನು ಅನುಭವಿಸಬಹುದಾಗಿದೆ.
“ಸೇವಾಭಾವದಿಂದ ಮಾಡಿದ ಕಾರ್ಯ ಫಲ ನೀಡುತ್ತದೆ”: ಪ್ರಧಾನಿ ಮೋದಿ
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಇಂದು ದೈವಿಕ ಮತ್ತು ಶಕ್ತಿಶಾಲಿ ಧ್ಯಾನ ಮಂದಿರ ಉದ್ಘಾಟನೆಯಾಗಿದೆ. ಸಂಕಲ್ಪ ಸ್ಪಷ್ಟವಾಗಿದ್ದು, ಸೇವಾಭಾವದಿಂದ ಕೆಲಸ ಮಾಡಿದಾಗ ಪ್ರತಿಯೊಂದು ಪ್ರಯತ್ನವೂ ಯಶಸ್ಸು ತರುತ್ತದೆ” ಎಂದು ಹೇಳಿದರು.
ಧ್ಯಾನ ಮಂದಿರ ಕುರಿತು ಮಾತನಾಡಿದ ಅವರು, “ಇಂದು ಉದ್ಘಾಟನೆಯಾದ ಧ್ಯಾನ ಮಂದಿರ ಮುಂದಿನ ಪೀಳಿಗೆಗಳಿಗೆ ಶಾಂತಿ ಮತ್ತು ನೆಮ್ಮದಿಯ ಕೇಂದ್ರವಾಗಲಿದೆ ಎಂಬ ವಿಶ್ವಾಸ ನನಗಿದೆ” ಎಂದರು.
“ನಾನು ನಿಮ್ಮವನಾಗಿದ್ದೇನೆ”: ಶ್ರೀ ಶ್ರೀ ರವಿಶಂಕರ್ ಜೊತೆ ಪ್ರಧಾನಿ ಹಾಸ್ಯಮಯ ಕ್ಷಣ
ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಶ್ರೀ ಶ್ರೀ ರವಿಶಂಕರ್ ಅವರನ್ನು ಉದ್ದೇಶಿಸಿ, “ನಾನು ನಿಮ್ಮವನಾಗಿದ್ದೇನೆ, ನಾನು ಇಂದಿರುವ ಸ್ಥಾನಕ್ಕೂ ನೀವು ಕಾರಣ” ಎಂದು ಹೇಳಿದಾಗ ಸಭಿಕರಿಂದ ಭಾರಿ ಚಪ್ಪಾಳೆ ಕೇಳಿಬಂತು.
“ಯುವಕರ ಮಾನಸಿಕ ಆರೋಗ್ಯ ರಾಷ್ಟ್ರ ನಿರ್ಮಾಣಕ್ಕೆ ಮುಖ್ಯ”
ಭಾರತ ಅಭಿವೃದ್ಧಿ ಹೊಂದಲು ಯುವಕರು ಮಾನಸಿಕವಾಗಿ ಶಾಂತ, ಸಾಮಾಜಿಕವಾಗಿ ಜವಾಬ್ದಾರಿಯುತ ಹಾಗೂ ಸಂವೇದನಾಶೀಲರಾಗಿರಬೇಕು ಎಂದು ಪ್ರಧಾನಿ ಹೇಳಿದರು.
“ಆಧ್ಯಾತ್ಮಿಕತೆ, ಯೋಗ, ಧ್ಯಾನ ಮತ್ತು ಮಾನಸಿಕ ಆರೋಗ್ಯ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆರ್ಟ್ ಆಫ್ ಲಿವಿಂಗ್‌ನಂತಹ ಸಂಸ್ಥೆಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಹೊಣೆಗಾರಿಕೆಯ ಭಾವನೆ ಬೆಳೆಸುತ್ತವೆ” ಎಂದು ಹೇಳಿದರು.

“ಸಮಾಜ ಸರ್ಕಾರಕ್ಕಿಂತ ಶಕ್ತಿಶಾಲಿ”
“ಯಾವುದೇ ಸರ್ಕಾರ ಯಶಸ್ವಿಯಾಗಬೇಕಾದರೆ ಸಮಾಜದ ಸಕ್ರಿಯ ಭಾಗಿ ಅಗತ್ಯ. ಸಮಾಜ ರಾಜಕೀಯ ಮತ್ತು ಸರ್ಕಾರಕ್ಕಿಂತ ಹೆಚ್ಚು ಶಕ್ತಿಶಾಲಿ” ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.
ಭಾರತದ ಡಿಜಿಟಲ್ ಕ್ರಾಂತಿ ಮತ್ತು ಯುವಕರ ಸಾಧನೆ
ಭಾರತದ ಡಿಜಿಟಲ್ ಪಾವತಿ, ಸ್ಟಾರ್ಟ್‌ಅಪ್ ವಲಯ ಹಾಗೂ ಬಾಹ್ಯಾಕಾಶ ಕ್ಷೇತ್ರದ ಸಾಧನೆಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ಭಾರತ ಇಂದು ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿದೆ. ನಮ್ಮ ಯುವಕರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದ್ದಾರೆ. ಈ ಸಾಧನೆಗಳಿಗೆ ಯುವಕರ ಶಕ್ತಿ ಮತ್ತು ಆರ್ಟ್ ಆಫ್ ಲಿವಿಂಗ್‌ನಂತಹ ಸಂಸ್ಥೆಗಳ ಪ್ರೇರಣೆಯೂ ಕಾರಣ” ಎಂದರು.
“ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದೀರಿ”: ಶ್ರೀ ಶ್ರೀ ರವಿಶಂಕರ್
ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಶ್ರೀ ಶ್ರೀ ರವಿಶಂಕರ್, “ನೀವು ದೇಶದಲ್ಲಿ ಮತ್ತು ವಿದೇಶಗಳಲ್ಲಿ ಶಾಂತಿ ಸ್ಥಾಪನೆಗೆ ಕ್ರಮಗಳನ್ನು ಕೈಗೊಂಡಿದ್ದೀರಿ. ಇಂದು ಭಾರತಮಾತೆ ಹಾಗೂ ಭಾರತೀಯರು ಹೆಮ್ಮೆಯಿಂದ ನಡೆಯುತ್ತಿದ್ದಾರೆ. ನೀವು ಭಾರತವನ್ನು ಹೊಸ ಮಟ್ಟಕ್ಕೆ ಕೊಂಡೊಯ್ದಿದ್ದೀರಿ” ಎಂದು ಹೇಳಿದರು.
ಸ್ವಚ್ಛ ಭಾರತ ಅಭಿಯಾನವನ್ನು ಉಲ್ಲೇಖಿಸಿದ ಅವರು, “ನೀವು ಅಧಿಕಾರಕ್ಕೆ ಬಂದ ತಕ್ಷಣ ‘ಸ್ವಚ್ಛ ಭಾರತ’ ಘೋಷಣೆ ಮಾಡಿದರು. ಇಂದು ದೇಶ ಹೆಚ್ಚು ಸ್ವಚ್ಛ, ಸುಂದರ, ಸುರಕ್ಷಿತ ಹಾಗೂ ಆತ್ಮವಿಶ್ವಾಸದಿಂದ ಕೂಡಿದೆ” ಎಂದರು.
9 ರಾಷ್ಟ್ರವ್ಯಾಪಿ ಸೇವಾ ಯೋಜನೆಗಳಿಗೆ ಚಾಲನೆ
ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಶಿಕ್ಷಣ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ಅರಣ್ಯ ವೃದ್ಧಿ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಜೈಲು ಸುಧಾರಣೆ ಮತ್ತು ಡಿಜಿಟಲ್ ಸಾಕ್ಷರತೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 9 ರಾಷ್ಟ್ರವ್ಯಾಪಿ ಸೇವಾ ಯೋಜನೆಗಳಿಗೆ ಚಾಲನೆ ನೀಡಿದರು.
45 ಲಕ್ಷ ಗಿಡ ನೆಡುವ ಗುರಿ
“ಮಿಷನ್ ಗ್ರೀನ್ ಎರ್ಥ್” (Mission Green Earth) ಅಡಿಯಲ್ಲಿ ಕಳೆದ ಒಂದು ವರ್ಷದಲ್ಲಿ 19 ರಾಜ್ಯಗಳ 121 ಜಿಲ್ಲೆಗಳಲ್ಲಿ 90 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿರುವ ಆರ್ಟ್ ಆಫ್ ಲಿವಿಂಗ್ ಸಂಸ್ಥೆ, ಇದೀಗ 45 ಲಕ್ಷ ಮೊರಿಂಗಾ (Moringa – ನುಗ್ಗೆ) ಸಸಿಗಳು ಹಾಗೂ 87,500 ಪವಿತ್ರ ಮರಗಳನ್ನು ಒಳಗೊಂಡ ಪಂಚವಟಿ ಯೋಜನೆ ಜಾರಿಗೆ ತರುವ ಗುರಿ ಹೊಂದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಡಿಜಿಟಲ್ ಸೇವೆಗಳು
11 ರಾಜ್ಯಗಳಲ್ಲಿ 12 “ರುಟ್ಯಾಗ್ ಸ್ಮಾರ್ಟ್ ವಿಲೇಜ್ ಸೆಂಟರ್” (RuTAGe Smart Village Center )ಗಳನ್ನು ಆರಂಭಿಸಲಾಗಿದ್ದು, ಯುವ ನಾಯಕತ್ವ ಮತ್ತು ಮಹಿಳಾ ನಾಯಕತ್ವ ಕಾರ್ಯಕ್ರಮಗಳ ಮೂಲಕ 50 ಸಾವಿರ ಯುವಕರು ಹಾಗೂ ಮಹಿಳೆಯರಿಗೆ ತರಬೇತಿ ನೀಡುವ ಉದ್ದೇಶ ಹೊಂದಲಾಗಿದೆ.
“ಗ್ರಾಮ ಡಿಜಿಟಲ್ ಸೇವಕ್” (Gram Digital Sevak ) ಯೋಜನೆಯಡಿ ಗ್ರಾಮೀಣ ಯುವಕರಿಗೆ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಸೇವೆಗಳ ತರಬೇತಿ ನೀಡಿ, ಸರ್ಕಾರಿ ಯೋಜನೆಗಳು ಹಾಗೂ ಆರೋಗ್ಯ ಸೇವೆಗಳನ್ನು ಗ್ರಾಮಗಳಿಗೆ ತಲುಪಿಸುವ ಕಾರ್ಯ ನಡೆಯಲಿದೆ.
ಜೈಲು ಸುಧಾರಣೆ ಮತ್ತು ಉಚಿತ ಶಿಕ್ಷಣ ವಿಸ್ತರಣೆ
ದೇಶದ 550 ಜೈಲುಗಳಲ್ಲಿ 1,000 ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸುಮಾರು 60 ಸಾವಿರ ಕೈದಿಗಳು ಮತ್ತು ಸಿಬ್ಬಂದಿಗೆ ಮನೋಶಾಂತಿ ಹಾಗೂ ವೃತ್ತಿಪರ ತರಬೇತಿ ನೀಡುವ ಯೋಜನೆ ಘೋಷಿಸಲಾಗಿದೆ.
ಇದೇ ವೇಳೆ, ಈಗಾಗಲೇ 22 ರಾಜ್ಯಗಳ 1,356 ಶಾಲೆಗಳ ಮೂಲಕ 1.2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಸಂಸ್ಥೆ, ಅದನ್ನು 2,000 ಶಾಲೆಗಳವರೆಗೆ ವಿಸ್ತರಿಸಲು ತೀರ್ಮಾನಿಸಿದೆ.
182 ದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರ ಭಾಗಿ
ತಿಂಗಳ ಕಾಲ ನಡೆಯುತ್ತಿರುವ ಈ ಸಂಭ್ರಮಾಚರಣೆಯಲ್ಲಿ 182 ದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗಿ ಆಗಿದ್ದಾರೆ. ಕೇಂದ್ರ ಸಚಿವರು, ರಾಜ್ಯಪಾಲರು, ಸಂಸದರು, ಉದ್ಯಮಿಗಳು, ರೈತರು, ಪುನರ್ವಸತಿ ಪಡೆದ ಕೈದಿಗಳು ಹಾಗೂ ಅಂತರರಾಷ್ಟ್ರೀಯ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
45 ವರ್ಷಗಳ ಪಯಣದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಧ್ಯಾನ, ಶಿಕ್ಷಣ ಮತ್ತು ಮಾನವೀಯ ಸೇವೆಗಳ ಮೂಲಕ 182 ದೇಶಗಳಲ್ಲಿ ಕೋಟ್ಯಂತರ ಜನರ ಜೀವನವನ್ನು ಸ್ಪರ್ಶಿಸಿದ್ದು, ಇಂದಿನ ಕಾರ್ಯಕ್ರಮ “ಶಾಂತ ಮನಸ್ಸು, ಸಹೃದಯ ಸಮಾಜ ಮತ್ತು ಆರೋಗ್ಯಕರ ಭೂಮಿ” ಎಂಬ ಸಂದೇಶವನ್ನು ಮತ್ತೊಮ್ಮೆ ಸಾರಿತು.




