ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂಬ ರಾಜಕೀಯ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ವಿಧಾನಸೌಧದಲ್ಲಿ ಇಂದು ಅಪರೂಪದ ಭಾವುಕ ಕ್ಷಣಗಳು ಕಂಡುಬಂದವು. ಜಾತಿಗಣತಿ ವರದಿ ಸ್ವೀಕರಿಸಲು ವಿಧಾನಸೌಧಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡ ಸಿಎಂ ಕಚೇರಿ ಸಿಬ್ಬಂದಿ ಕಣ್ಣೀರು ಹಾಕಿ ಮನವಿ ಮಾಡಿದ ಘಟನೆ ನಡೆದಿದೆ.
ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿಗಣತಿ ವರದಿ ಸ್ವೀಕರಿಸಲು ಸಂಜೆ ವೇಳೆಗೆ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕಂಡು ಮುಖ್ಯಮಂತ್ರಿ ಕಚೇರಿಯ ಹಲವು ಸಿಬ್ಬಂದಿ, ವಿಶೇಷವಾಗಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರು ಭಾವುಕರಾದರು.
“ಸರ್… ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಸರ್… ಪ್ಲೀಸ್…” ಎಂದು ಕೈಮುಗಿದು ಸಿಬ್ಬಂದಿ ಕಣ್ಣೀರಿಟ್ಟರು. ಸಿಬ್ಬಂದಿಯ ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ತಮ್ಮ ವಿಶಿಷ್ಟ ಕೈಸನ್ನೆಯ ಮೂಲಕ ಸಮಾಧಾನಪಡಿಸಿ ಧೈರ್ಯ ತುಂಬಿದರು. ಈ ವೇಳೆ ಕೆಲ ಕ್ಷಣಗಳ ಕಾಲ ಅಲ್ಲಿ ಭಾವುಕ ವಾತಾವರಣ ನಿರ್ಮಾಣವಾಗಿತ್ತು.
ಸಿಎಂ ಕಚೇರಿ ಇತಿಹಾಸದಲ್ಲೇ ಇಂತಹ ಭಾವುಕ ದೃಶ್ಯ ಇದೇ ಮೊದಲ ಬಾರಿಗೆ ಕಂಡುಬಂದಿದೆ ಎನ್ನಲಾಗುತ್ತಿದೆ.
ಇನ್ನೊಂದೆಡೆ, ಮುಖ್ಯಮಂತ್ರಿ ನಿವಾಸ ‘ಕಾವೇರಿ’ಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿದ್ದರಾಮಯ್ಯ ರಾಜೀನಾಮೆ ನಿರ್ಧಾರವನ್ನು ತಡೆಯಲು ಸಚಿವರು ಹಾಗೂ ಶಾಸಕರು ಕೊನೆಕ್ಷಣದ ಸಮಾಲೋಚನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಆಪ್ತ ವಲಯದ ಸಚಿವರಾದ ಬೈರತಿ ಸುರೇಶ್ ಹಾಗೂ ಕೆ.ಜೆ. ಜಾರ್ಜ್ ಅವರು ‘ಕಾವೇರಿ’ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ. “ಯಾವುದೇ ಕಾರಣಕ್ಕೂ ತುರ್ತು ನಿರ್ಧಾರ ಕೈಗೊಳ್ಳಬೇಡಿ. ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರ ಅಭಿಪ್ರಾಯ ಪಡೆದುಕೊಳ್ಳೋಣ” ಎಂದು ಅವರು ಸಿಎಂ ಎದುರು ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ಸೂಚನೆಗಳ ನಡುವೆ ರಾಜ್ಯ ರಾಜಕೀಯ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಸಿದ್ದರಾಮಯ್ಯ ಮುಂದಿನ ನಡೆ ಏನು ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.




