ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಭಾವುಕರಾಗಿ ಮಾತನಾಡಿದ ಕ್ಷಣಗಳು ಕಾಂಗ್ರೆಸ್ ನಾಯಕರನ್ನೇ ಅಲ್ಲ, ರಾಜ್ಯದ ಜನತೆಯನ್ನೂ ಮೌನಕ್ಕೊಳಪಡಿಸಿದವು. ಕ್ಯಾಮೆರಾ ಮುಂದೆ ಕೈಮುಗಿದು ನಿಂತ ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಡಿ.ಕೆ.ಶಿವಕುಮಾರ್, ಪರಮೇಶ್ವರ್, ಕೆ.ಜೆ.ಜಾರ್ಜ್, ಚೆಲುವರಾಯಸ್ವಾಮಿ, ಹೆಚ್.ಸಿ.ಮಹದೇವಪ್ಪ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ನಿಂತಿದ್ದರು.
ಸಿದ್ದರಾಮಯ್ಯ ಮಾತನಾಡುವ ಪ್ರತಿಯೊಂದು ಮಾತಿನ ನಡುವೆ ವೇದಿಕೆಯಲ್ಲಿ ಮೌನ ಆವರಿಸಿತ್ತು. ಶಾಸಕ ಅಜಯ್ ಸಿಂಗ್ ಕಣ್ಣೀರಿಟ್ಟರೆ, ಎಂ.ಬಿ.ಪಾಟೀಲ್, ಚೆಲುವರಾಯಸ್ವಾಮಿ, ಪರಮೇಶ್ವರ್, ಜಾರ್ಜ್ ಸೇರಿದಂತೆ ಹಲವು ನಾಯಕರು ಭಾವುಕರಾದರು. ಶಾಸಕ ಹ್ಯಾರೀಸ್ ಹಾಗೂ ರಿಜ್ವಾನ್ ಅರ್ಷದ್ ಕಣ್ಣೀರಿಟ್ಟ ದೃಶ್ಯಗಳು ಗಮನಸೆಳೆದವು.
“ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ರಾಜ್ಯಪಾಲರ ಕಾರ್ಯದರ್ಶಿಗೆ ಪತ್ರ ಸಲ್ಲಿಸಿದ್ದೇನೆ. ಹೈಕಮಾಂಡ್ ಹೇಳಿದರೆ ರಾಜೀನಾಮೆ ಕೊಡುತ್ತೇನೆ ಎಂದು ಮೊದಲೇ ಹೇಳಿದ್ದೆ. ಅದರಂತೆ ಇಂದು ನನ್ನ ಕರ್ತವ್ಯ ನೆರವೇರಿಸಿದ್ದೇನೆ,” ಎಂದು ಸಿದ್ದರಾಮಯ್ಯ ಶಾಂತ ಧ್ವನಿಯಲ್ಲಿ ಹೇಳಿದರು.
ತಮ್ಮ ರಾಜಕೀಯ ಬದುಕನ್ನು ನೆನೆದು ಮಾತನಾಡಿದ ಅವರು, “ನಾನು ಹಳ್ಳಿಗಾಡಿನಿಂದ ಬಂದವನು. ಶಾಸಕ, ಸಚಿವ, ಮುಖ್ಯಮಂತ್ರಿ ಆಗುತ್ತೇನೆ ಎಂದು ಕನಸೂ ಕಂಡಿರಲಿಲ್ಲ. ನಮ್ಮ ಕುಟುಂಬದಲ್ಲಿ ಯಾರೂ ರಾಜಕಾರಣದಲ್ಲಿ ಇರಲಿಲ್ಲ. ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕ,” ಎಂದು ಹೇಳಿದರು.
“ಸಂವಿಧಾನ ಇರದಿದ್ದರೆ ನಾನು ವಿದ್ಯಾವಂತನಾಗುತ್ತಿರಲಿಲ್ಲ. ಶಾಸಕ, ಸಚಿವ, ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಕುರಿ ಮೇಯಿಸಿಕೊಂಡೇ ಇರಬೇಕಿತ್ತು,” ಎಂಬ ಮಾತು ಹೇಳುವಾಗ ಸಭಾಂಗಣದಲ್ಲಿ ಮೌನ ಆವರಿಸಿತು.
ಬುದ್ಧ, ಬಸವಣ್ಣ, ಗಾಂಧಿ ಹಾಗೂ ಅಂಬೇಡ್ಕರ್ ತತ್ವಗಳಿಂದ ಪ್ರೇರಿತರಾಗಿ ರಾಜಕೀಯ ನಡೆಸಿದ್ದೇನೆ ಎಂದ ಸಿದ್ದರಾಮಯ್ಯ, “ಸಮಾನತೆಯ ಸಮಾಜ ನಿರ್ಮಾಣವೇ ನನ್ನ ಕನಸು. ಎಲ್ಲರಿಗೂ ಅವಕಾಶ ಸಿಗಬೇಕು. ಅದಕ್ಕಾಗಿಯೇ ಗ್ಯಾರೆಂಟಿ ಯೋಜನೆಗಳನ್ನು ತಂದೆವು,” ಎಂದು ಹೇಳಿದರು.
ತಮ್ಮ ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸಿದ ಅವರು, “ಐದು ಗ್ಯಾರೆಂಟಿ ಯೋಜನೆಗಳನ್ನು ಮೊದಲ ವರ್ಷದಲ್ಲೇ ಜಾರಿಗೆ ತಂದೆವು. ೧.೪೦ ಲಕ್ಷ ಕೋಟಿ ರೂ. ಖರ್ಚು ಮಾಡಿ ಜನತೆಗೆ ಕೊಟ್ಟ ವಚನ ಉಳಿಸಿಕೊಂಡೆವು. ಕರ್ನಾಟಕ ದೇಶದಲ್ಲೇ ಆರ್ಥಿಕವಾಗಿ ಮುಂಚೂಣಿಯಲ್ಲಿದೆ,” ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, “ಅಪ್ಪರ್ ಭದ್ರಾ, ಪೆರಿಪರಲ್ ರಿಂಗ್ ರಸ್ತೆ, ಕೆರೆ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳಿಗೆ ಘೋಷಿಸಿದ ಹಣ ಬಂದಿಲ್ಲ. ಜಿಎಸ್‌ಟಿ ಪರಿಹಾರವೂ ನಿಲ್ಲಿಸಲಾಯಿತು,” ಎಂದು ಆರೋಪಿಸಿದರು.
ರಾಜಕೀಯ ಜೀವನದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಅವರು, “ನಾನು ಅಧಿಕಾರದ ಹಿಂದೆ ಹೋದವನಲ್ಲ. ಹಣದ ಹಿಂದೆ ಹೋದವನಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ. ನಾನು ನಂಬಿದ ಮೌಲ್ಯಗಳಿಗೆ ಎಂದೂ ರಾಜಿಯಾಗಿಲ್ಲ,” ಎಂದು ಹೇಳಿದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೃತಜ್ಞತೆ ಸಲ್ಲಿಸಿದ ಸಿದ್ದರಾಮಯ್ಯ, “ನನ್ನನ್ನು ಕಾಂಗ್ರೆಸ್‌ಗೆ ಬರಮಾಡಿಕೊಂಡು ಅವಕಾಶ ಕೊಟ್ಟವರು ಅವರಿಗೆ ನಾನು ಚಿರಋಣಿ,” ಎಂದರು.
“ಕೊನೆ ಉಸಿರು ಇರುವವರೆಗೆ ರಾಜಕಾರಣದಲ್ಲಿ ಇರುತ್ತೇನೆ. ಕೋಮುವಾದಿ ಶಕ್ತಿಗಳ ವಿರುದ್ಧ, ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಸುತ್ತೇನೆ,” ಎಂದು ಘೋಷಿಸಿದ ಸಿದ್ದರಾಮಯ್ಯ, ತಾವು ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.
ಅಂತಿಮವಾಗಿ, “ಜನ ಐದು ವರ್ಷಕ್ಕೆ ಆಯ್ಕೆ ಮಾಡಿದ್ದಾರೆ. ಇನ್ನೂ ಎರಡು ವರ್ಷ ಇದೆ. ಜನರ ಸೇವೆ ಮುಂದುವರಿಸುತ್ತೇನೆ,” ಎಂದು ಹೇಳಿ ಕೈಮುಗಿದ ಕ್ಷಣ ಸುದ್ದಿಗೋಷ್ಠಿಯನ್ನು ಭಾವುಕ ವಾತಾವರಣಕ್ಕೆ ತಳ್ಳಿತು.




