ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಸಮಾರಂಭ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು. ರಾಜ್ಯಪಾಲ ಹಾಗೂ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಘಟಿಕೋತ್ಸವಕ್ಕೆ ವಿಶೇಷ ಕಳೆ ತಂದರು.
ಈ ಕಾರ್ಯಕ್ರಮದಲ್ಲಿ ಡಿಆರ್‌ಡಿಓ (DRDO) ಮಹಾನಿರ್ದೇಶಕರಾದ ಡಾ. ಬಿನಯ್ ಕುಮಾರ್ ದಾಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ಆರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಿ ವಿಶ್ವವಿದ್ಯಾಲಯವು ಸನ್ಮಾನಿಸಿತು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಡಾಕ್ಟರೇಟ್
ಸಂಗೀತ, ಕ್ರೀಡೆ, ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಾದ ಸಂಗೀತ ನಿರ್ದೇಶಕ ಅರ್ಜುನ ಜನ್ಯ, ಕ್ರಿಕೆಟರ್ ವೆಂಕಟೇಶ್ ಪ್ರಸಾದ್, ಶಿಕ್ಷಣ ತಜ್ಞ ಟಿ.ಕೆ. ನಾರಾಯಣಪ್ಪ, ಎಂಎಲ್‌ಸಿ ಡಾ. ಕೆ. ಗೋವಿಂದ್ ರಾಜ್, ಶಿಕ್ಷಣ ತಜ್ಞ ಮೋಹನ್ ಆಳ್ವಾ ಹಾಗೂ ಕೈಗಾರಿಕೋದ್ಯಮಿ ಬಾವಾ ಮೊಹಮ್ಮದ್ ಫಾರೂಕ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಲಾಯಿತು.
ಉಪ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.
ಸಾವಿರಾರು ವಿದ್ಯಾರ್ಥಿಗಳಿಗೆ ಪದವಿ, ಪ್ರತಿಭಾವಂತರಿಗೆ ಚಿನ್ನದ ಪದಕ
ಈ ಘಟಿಕೋತ್ಸವದಲ್ಲಿ ಒಟ್ಟು 37,370 ವಿದ್ಯಾರ್ಥಿಗಳಿಗೆ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ನೀಡಲಾಯಿತು. ಜೊತೆಗೆ 23 ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಪದವಿಗಳು ಪ್ರದಾನಗೊಂಡವು.
ಪ್ರಥಮ ರ‍್ಯಾಂಕ್ ಪಡೆದ 73 ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪ್ರಮಾಣಪತ್ರ, ಚಿನ್ನದ ಪದಕ ಮತ್ತು ನಗದು ಬಹುಮಾನ ವಿತರಿಸಲಾಯಿತು.
ಚಿನ್ನದ ಪದಕ ವಿಜೇತರ ಮೆರುಗು
ಈ ಬಾರಿ ಸ್ನೇಹಾ ಟಿ. (ಎಂಎಸ್ಸಿ ರಸಾಯನಶಾಸ್ತ್ರ) ನಾಲ್ಕು ಚಿನ್ನದ ಪದಕಗಳನ್ನು ಪಡೆದು ವಿಶೇಷ ಗಮನ ಸೆಳೆದರು. ಅಭಿಷೇಕ್ ಶ್ರೀರಾಮ್ (ಬಿ.ಕಾಂ) ಮತ್ತು ದಿವ್ಯಶ್ರೀ ಎಸ್ (ಬಿಬಿಎ) ತಲಾ ಮೂರು ಚಿನ್ನದ ಪದಕಗಳನ್ನು ಗಳಿಸಿ ಸಾಧನೆ ಮೆರೆದರು.
ಗೌರವಕ್ಕೆ ಕೃತಜ್ಞತೆ
ಗೌರವ ಡಾಕ್ಟರೇಟ್ ಸ್ವೀಕರಿಸಿದ ಅರ್ಜುನ ಜನ್ಯ ವಿಶ್ವವಿದ್ಯಾಲಯ ನೀಡಿದ ಈ ಗೌರವಕ್ಕೆ ಕೃತಜ್ಞತೆ ಸಲ್ಲಿಸಿ, ಇದು ತಮ್ಮ ಮುಂದಿನ ಕಾರ್ಯಗಳಿಗೆ ಮತ್ತಷ್ಟು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.




