ರೈತರು–ಯುವಕರಿಗೆ ಹೊಸ ಯೋಜನೆಗಳು, 56 ಸಾವಿರ ಉದ್ಯೋಗ, ಶಿಕ್ಷಣಕ್ಕೆ ಮಹಾ ಪ್ಲಾನ್
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಒಟ್ಟು ₹4.48 ಲಕ್ಷ ಕೋಟಿ ಗಾತ್ರದ ಬಜೆಟ್ ಮೂಲಕ ಅಭಿವೃದ್ಧಿ ಮತ್ತು ಜನಪರ ಯೋಜನೆಗಳಿಗೆ ಒತ್ತು ನೀಡಿದ್ದಾರೆ. ತಮ್ಮ ರಾಜಕೀಯ ಜೀವನದ 17ನೇ ಬಜೆಟ್ ಮಂಡಿಸಿರುವ ಸಿಎಂ, ರೈತರು, ಯುವಕರು, ಮಹಿಳೆಯರು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದ್ದು 56 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಜೊತೆಗೆ ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು 800 ಕರ್ನಾಟಕ ಪಬ್ಲಿಕ್ ಶಾಲೆಗಳು ಆರಂಭಿಸುವ ಯೋಜನೆ ಪ್ರಕಟಿಸಲಾಗಿದೆ.
ಕೃಷಿ ಕ್ಷೇತ್ರಕ್ಕೂ ಸರ್ಕಾರ ವಿಶೇಷ ಗಮನ ನೀಡಿದ್ದು ರೈತರ ಆದಾಯ ಹೆಚ್ಚಿಸಲು ಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ಇನ್ನು ಮನೆ ಇಲ್ಲದವರಿಗೆ ನೆರವಾಗಲು 50 ಸಾವಿರ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ನೀಡುವ ಯೋಜನೆ ಘೋಷಿಸಲಾಗಿದೆ.
ತಂತ್ರಜ್ಞಾನ ಕ್ಷೇತ್ರಕ್ಕೂ ಬಜೆಟ್‌ನಲ್ಲಿ ಮಹತ್ವದ ಸ್ಥಾನ ದೊರೆತಿದ್ದು ಕೃತಕ ಬುದ್ಧಿಮತ್ತೆ (AI) ಆಧಾರಿತ ಯೋಜನೆಗಳನ್ನು ಆರಂಭಿಸುವುದಾಗಿ ಸರ್ಕಾರ ತಿಳಿಸಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿರ್ಬಂಧಿಸುವ ನಿರ್ಧಾರ ಕೂಡ ಗಮನ ಸೆಳೆದಿದೆ.
ಇದೇ ವೇಳೆ ಬೆಂಗಳೂರು ಅಭಿವೃದ್ಧಿಗೆ ಮೆಟ್ರೋ ವಿಸ್ತರಣೆ, ಸುರಂಗ ರಸ್ತೆ ಯೋಜನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಭಾರಿ ಅನುದಾನ ನೀಡಲಾಗಿದೆ.




