ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಐದು ದತ್ತಿನಿಧಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ
ಸಾಮಾಜಿಕ, ಮಾನವೀಯ ಸಮಸ್ಯೆಗಳು, ಶೋಷಿತ ಸಮುದಾಯಗಳು ಹಾಗೂ ಕೃಷಿ ಕ್ಷೇತ್ರದ ಕುರಿತು ಪರಿಣಾಮಕಾರಿ ವರದಿ-ಲೇಖನಗಳಿಗೆ ಮನ್ನಣೆ; ತಲಾ ₹10 ಸಾವಿರ ನಗದು ಬಹುಮಾನ
2min read
ಬೆಂಗಳೂರು, ಅ. 30: ಪತ್ರಿಕೋದ್ಯಮದಲ್ಲಿ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು ಹಾಗೂ ಜನಪರ ಕಾಳಜಿಯನ್ನು ಪ್ರತಿಬಿಂಬಿಸುವ ಬರಹಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ಮಾಧ್ಯಮ ಅಕಾಡೆಮಿಯು 2026ನೇ ಸಾಲಿನ ಐದು ದತ್ತಿನಿಧಿ ಪ್ರಶಸ್ತಿಗಳಿಗಾಗಿ ಪತ್ರಕರ್ತರಿಂದ ಲೇಖನ ಮತ್ತು ವರದಿಗಳನ್ನು ಆಹ್ವಾನಿಸಿದೆ.
ರಾಜ್ಯದ ವಿವಿಧ ಮಾಧ್ಯಮ ಸಂಸ್ಥೆಗಳು ಹಾಗೂ ಹಿರಿಯ ಪತ್ರಕರ್ತರ ಹೆಸರಿನಲ್ಲಿ ಸ್ಥಾಪಿಸಿರುವ ಈ ದತ್ತಿನಿಧಿ ಪ್ರಶಸ್ತಿಗಳ ಮೂಲಕ ಸಮಾಜದ ವಿವಿಧ ಕ್ಷೇತ್ರಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿದ ಪತ್ರಕರ್ತರ ಬರಹಗಳನ್ನು ಗುರುತಿಸಿ ಗೌರವಿಸಲಾಗುತ್ತದೆ.
ಐದು ಪ್ರಶಸ್ತಿಗಳ ವಿವರ ಹೀಗಿದೆ:
- ಅಭಿಮಾನಿ ಪ್ರಶಸ್ತಿ: ಬೆಂಗಳೂರಿನ ಅಭಿಮಾನಿ ಪ್ರಕಾಶನ ಸಂಸ್ಥೆ ಸ್ಥಾಪಿಸಿರುವ ಈ ಪ್ರಶಸ್ತಿಗೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಕನ್ನಡ ಪತ್ರಿಕೆಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಲೇಖನ ಮತ್ತು ವರದಿಗಳನ್ನು ಪರಿಗಣಿಸಲಾಗುತ್ತದೆ.
- ಮೈಸೂರು ದಿಗಂತ ಪ್ರಶಸ್ತಿ: ಮೈಸೂರಿನ ಮೈಸೂರು ದಿಗಂತ ಪತ್ರಿಕಾ ಸಂಸ್ಥೆ ಸ್ಥಾಪಿಸಿರುವ ಈ ಪ್ರಶಸ್ತಿಗೆ ಮಾನವೀಯ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನ ಮತ್ತು ವರದಿಗಳನ್ನು ಆಯ್ಕೆ ಮಾಡಲಾಗುತ್ತದೆ.
- ಅಭಿಮನ್ಯು ಪ್ರಶಸ್ತಿ: ಬೆಂಗಳೂರಿನ ಅಭಿಮನ್ಯು ಪತ್ರಿಕಾ ಸಂಸ್ಥೆ ಸ್ಥಾಪಿಸಿರುವ ಈ ಪ್ರಶಸ್ತಿಗೆ ದಮನಿತ ಸಮುದಾಯಗಳ ಪರ ದನಿಯಾಗುವ ಅತ್ಯುತ್ತಮ ಲೇಖನ, ಅಂಕಣ, ಸಂಪಾದಕೀಯ ಅಥವಾ ಪರಿಣಾಮಕಾರಿ ವರದಿಯನ್ನು ಪರಿಗಣಿಸಲಾಗುತ್ತದೆ.
- ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ಬೆಂಗಳೂರಿನ ಪ್ರಜಾ ಸಂದೇಶ ಪತ್ರಿಕಾ ಸಂಸ್ಥೆ ಸ್ಥಾಪಿಸಿರುವ ಈ ಪ್ರಶಸ್ತಿಗೆ ಶೋಷಣೆಯ ವಿವಿಧ ಆಯಾಮಗಳನ್ನು ಪರಿಣಾಮಕಾರಿಯಾಗಿ ಬಿಂಬಿಸುವ ಲೇಖನಗಳನ್ನು ಪರಿಗಣಿಸಲಾಗುತ್ತದೆ.
- ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿ: ಹಿರಿಯ ಪತ್ರಕರ್ತ ಬಸವರಾಜ ದೊಡ್ಡಮನಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಈ ಪ್ರಶಸ್ತಿಗೆ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯುತ್ತಮ ವರದಿ, ಅಂಕಣ ಅಥವಾ ಲೇಖನವನ್ನು ಆಯ್ಕೆ ಮಾಡಲಾಗುತ್ತದೆ.
ಈ ಐದೂ ಪ್ರಶಸ್ತಿಗಳು ತಲಾ ₹10,000 ನಗದು ಬಹುಮಾನ ಒಳಗೊಂಡಿವೆ.
ಅರ್ಜಿ ಸಲ್ಲಿಕೆಗೆ ಅರ್ಹತೆ ಮತ್ತು ನಿಯಮಗಳು
2026ರ ಜನವರಿ 1ರಿಂದ ಅಕ್ಟೋಬರ್ 30ರವರೆಗೆ ಪ್ರಕಟವಾಗಿರುವ ತಮ್ಮ ಒಂದು ಲೇಖನ ಅಥವಾ ವರದಿಯನ್ನು ಆಸಕ್ತ ಪತ್ರಕರ್ತರು ಪ್ರಶಸ್ತಿಗೆ ಸಲ್ಲಿಸಬಹುದು. ಕನ್ನಡ ದೈನಿಕ ಪತ್ರಿಕೆಗಳು, ಟಿವಿ ವಾಹಿನಿಗಳು ಹಾಗೂ ವಾರಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಬೈಲೈನ್ (ಹೆಸರು) ಹೊಂದಿರುವ ಲೇಖನ ಮತ್ತು ವರದಿಗಳನ್ನು ಮಾತ್ರ ಪರಿಗಣಿಸಲಾಗುತ್ತದೆ. ಬೈಲೈನ್ ಪ್ರಕಟವಾಗದಿದ್ದಲ್ಲಿ ಸಂಬಂಧಪಟ್ಟ ಪತ್ರಿಕೆಯ ಸಂಪಾದಕರಿಂದ ದೃಢೀಕರಣ ಪತ್ರವನ್ನು ಲಗತ್ತಿಸುವುದು ಕಡ್ಡಾಯವಾಗಿದೆ.
ನವೆಂಬರ್ 21 ಅರ್ಜಿ ಸಲ್ಲಿಕೆಗೆ ಕೊನೆಯ ದಿನ
ಪ್ರಶಸ್ತಿಗೆ ಸಲ್ಲಿಸುವ ಲೇಖನ ಅಥವಾ ವರದಿಯ ಲಕೋಟೆಯ ಮೇಲೆ ಸಂಬಂಧಪಟ್ಟ ಪ್ರಶಸ್ತಿಯ ಹೆಸರನ್ನು 'ಅಭಿಮಾನಿ ಪ್ರಶಸ್ತಿ-2026', 'ಮೈಸೂರು ದಿಗಂತ ಪ್ರಶಸ್ತಿ-2026', 'ಅಭಿಮನ್ಯು ಪ್ರಶಸ್ತಿ-2026', 'ಪ್ರಜಾ ಸಂದೇಶ ದತ್ತಿ ಪ್ರಶಸ್ತಿ-2026' ಅಥವಾ 'ಬಸವರಾಜ ದೊಡ್ಡಮನಿ ದತ್ತಿ ಪ್ರಶಸ್ತಿ-2026' ಎಂದು ಸ್ಪಷ್ಟವಾಗಿ ನಮೂದಿಸಬೇಕು.
ಪೂರ್ಣಗೊಂಡ ಅರ್ಜಿಗಳು ಹಾಗೂ ಲೇಖನ-ವರದಿಗಳನ್ನು ನವೆಂಬರ್ 21, 2026ರೊಳಗೆ ಕಾರ್ಯದರ್ಶಿಗಳು, ಕರ್ನಾಟಕ ಮಾಧ್ಯಮ ಅಕಾಡೆಮಿ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ, ಡಾ. ಬಿ.ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು-560001 ವಿಳಾಸಕ್ಕೆ ಅಂಚೆ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬಹುದು.
ಪ್ರಶಸ್ತಿಗಳ ಆಯ್ಕೆ ಸಂಬಂಧ ಕರ್ನಾಟಕ ಮಾಧ್ಯಮ ಅಕಾಡೆಮಿ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read this:ಗಣನೀಯ ಸಾಧಕರಿಗೆ 2026-27ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಘೋಷಣೆ





