- Home
- Karnataka
- Bengaluru Urban
- Government
ಬೆಂಗಳೂರು: ಕುಮಾರಪಾರ್ಕ್ ಪಶ್ಚಿಮದಲ್ಲಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪಾರಂಪರಿಕ ಕೇಂದ್ರ ಕಚೇರಿ ಕಟ್ಟಡವನ್ನು ನೆಲಸಮಗೊಳಿಸಿ ಬಹುಮಹಡಿ ಕಟ್ಟಡ ನಿರ್ಮಿಸುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಈ ಕುರಿತು ಬಿಡಿಎ ಆಯುಕ್ತರಿಗೆ ಪತ್ರ ಬರೆದಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹೆಚ್. ಶಿವರಾಮೇಗೌಡ, ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರು 1945ರಲ್ಲಿ ಸ್ಥಾಪಿಸಿದ ಸಿಟಿ ಇಂಪ್ರೂವ್ಮೆಂಟ್ ಟ್ರಸ್ಟ್ ಬೋರ್ಡ್ (CITB)ನ ಐತಿಹಾಸಿಕ ನೆಲೆಯೇ ಈಗಿನ ಬಿಡಿಎ ಕೇಂದ್ರ ಕಚೇರಿ ಎಂದು ತಿಳಿಸಿದ್ದಾರೆ.
ಕಳೆದ ಸುಮಾರು ಎಂಟು ದಶಕಗಳಿಂದ ಈ ಸಂಸ್ಥೆ ಬೆಂಗಳೂರಿನಲ್ಲಿ ಹಲವಾರು ಬಡಾವಣೆಗಳು, ಕೈಗಾರಿಕಾ ಪ್ರದೇಶಗಳು, ರಸ್ತೆಗಳು, ಮೇಲ್ಸೇತುವೆ ಹಾಗೂ ಕೆಳಸೇತುವೆಗಳನ್ನು ನಿರ್ಮಿಸಿ ನಗರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ವೃಕ್ಷಗಳಿಂದ ಆವೃತವಾಗಿರುವ ಕುಮಾರಪಾರ್ಕ್ನ ಈ ಕಚೇರಿ ಪ್ರದೇಶ ಬೆಂಗಳೂರು ಜನರ ಭಾವನೆ ಮತ್ತು ನಗರದ ಇತಿಹಾಸದ ಸಂಕೇತವಾಗಿದೆ ಎಂದು ವೇದಿಕೆ ಹೇಳಿದೆ.
ಕಟ್ಟಡಗಳು ಇನ್ನೂ ಹಲವು ದಶಕಗಳ ಕಾಲ ಬಳಕೆಗೆ ಯೋಗ್ಯವಾಗಿರುವಾಗಲೇ, ಕಳೆದ ಎರಡು ವರ್ಷಗಳಲ್ಲಿ ನವೀಕರಣಕ್ಕಾಗಿ ಸುಮಾರು ₹15 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರ ಕೈಗೊಳ್ಳುವುದು ಸಾರ್ವಜನಿಕರ ತೆರಿಗೆ ಹಣದ ದುರ್ಬಳಕೆ ಎಂದು ಕರವೇ ಆರೋಪಿಸಿದೆ.
“ಮೈಸೂರು ಮಹಾರಾಜರ ದೂರದೃಷ್ಟಿಯ ಪ್ರತೀಕವಾಗಿರುವ ಈ ಪಾರಂಪರಿಕ ಕಟ್ಟಡವನ್ನು ಯಥಾವತ್ತಾಗಿ ಉಳಿಸಿ, ಮುಂದಿನ ಪೀಳಿಗೆಗೂ ಸಂರಕ್ಷಿಸಬೇಕು. ನೆಲಸಮಗೊಳಿಸುವ ನಿರ್ಧಾರವನ್ನು ಬಿಡಿಎ ತಕ್ಷಣ ಹಿಂಪಡೆಯಬೇಕು” ಎಂದು ಶಿವರಾಮೇಗೌಡ ಒತ್ತಾಯಿಸಿದ್ದಾರೆ.
No ratings yet













