ಉದ್ಯೋಗ ಹುಡುಕುತ್ತಿದ್ದೀರಾ? 110ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಅವಕಾಶ ತೆರೆದ NRAI–ಮಿಟ್ಟಿ ಕೆಫೆ ಉದ್ಯೋಗ ಮೇಳ
ಎಂಪೈರ್, ನಾಗಾರ್ಜುನ, ನಂದನ ಪ್ಯಾಲೆಸ್, ಸಮೋಸಾ ಪಾರ್ಟಿ ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ರೆಸ್ಟೋರೆಂಟ್ ಬ್ರ್ಯಾಂಡ್ಗಳು ಭಾಗವಹಿಸಿದ NRAI ಬೆಂಗಳೂರು–ಮಿಟ್ಟಿ ಕೆಫೆ ಉದ್ಯೋಗ ಮೇಳವು 110ಕ್ಕೂ ಹೆಚ್ಚು ವಿಶೇಷ ಚೇತನ ಉದ್ಯೋಗಾಕಾಂಕ್ಷಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಹೊಸ ವೃತ್ತಿಜೀವನದ ಅವಕಾಶಗಳ ಬಾಗಿಲು ತೆರೆದಿದೆ.
2min read
ಬೆಂಗಳೂರು, ಅ. 22: ಉದ್ಯೋಗದ ನಿರೀಕ್ಷೆಯಲ್ಲಿರುವ ವಿಶೇಷ ಚೇತನ ಯುವಕರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿರುವ NRAI ಬೆಂಗಳೂರು ಘಟಕ ಮತ್ತು ಮಿಟ್ಟಿ ಕೆಫೆ, ನಗರದ ಆತಿಥ್ಯ ಕ್ಷೇತ್ರದಲ್ಲಿ 110ಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಮಹತ್ವದ ಉದ್ಯೋಗ ಮೇಳವನ್ನು ಆಯೋಜಿಸಿತು.
ಸೇಂಟ್ ಮಾರ್ಕ್ಸ್ ರಸ್ತೆಯ ಮಿರಾಜ್ನಲ್ಲಿ ನಡೆದ ಈ ಮೇಳದಲ್ಲಿ ಎಂಪೈರ್, ನಾಗಾರ್ಜುನ, ನಂದನ ಪ್ಯಾಲೆಸ್, ಸಮೋಸಾ ಪಾರ್ಟಿ, ಗೈಸ್ಟ್ ಬ್ರೂಯಿಂಗ್ ಕಂಪನಿ, ಜಸ್ಟ್ ಬಿಎಲ್ಆರ್, ನೋವೇರ್, 13ನೇ ಫ್ಲೋರ್, ಎನ್ಎಚ್ 8, ವಿ&ಆರ್ಒ ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ರೆಸ್ಟೋರೆಂಟ್ ಬ್ರ್ಯಾಂಡ್ಗಳು ಭಾಗವಹಿಸಿದ್ದವು.
ಉದ್ಯೋಗಕ್ಕಾಗಿ ಹಲವು ಕಡೆ ಅಲೆದಾಡಬೇಕಾದ ಪರಿಸ್ಥಿತಿಗೆ ಪರ್ಯಾಯವಾಗಿ, ಅಭ್ಯರ್ಥಿಗಳು ಒಂದೇ ವೇದಿಕೆಯಲ್ಲಿ ಹಲವು ಪ್ರತಿಷ್ಠಿತ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿಯಾಗಿ ತಮ್ಮ ಕೌಶಲ್ಯ, ಅನುಭವ ಮತ್ತು ಆಸಕ್ತಿಗೆ ತಕ್ಕ ಕೆಲಸದ ಅವಕಾಶಗಳನ್ನು ಅನ್ವೇಷಿಸುವ ಅವಕಾಶ ಪಡೆದರು.
ಈ ಮೇಳವು ಕೇವಲ ನೇಮಕಾತಿ ಕಾರ್ಯಕ್ರಮವಾಗಿರದೆ, “ಅವಕಾಶ ಸಿಕ್ಕರೆ ಪ್ರತಿಭೆ ಎಲ್ಲರಲ್ಲೂ ಇದೆ” ಎಂಬ ಸಂದೇಶವನ್ನು ಬಲವಾಗಿ ಸಾರಿತು. ವಿಶೇಷವಾಗಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರು ಹಾಗೂ ವಿಶೇಷ ಚೇತನರಿಗೆ ಆತಿಥ್ಯ ಕ್ಷೇತ್ರದಲ್ಲೂ ಉತ್ತಮ ವೃತ್ತಿಜೀವನ ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂಬುದನ್ನು ಕಾರ್ಯಕ್ರಮ ತೋರಿಸಿಕೊಟ್ಟಿತು.
NRAI ಬೆಂಗಳೂರು ಘಟಕದ ಮುಖ್ಯಸ್ಥ ಅನಂತ್ ನಾರಾಯಣ್ ಮಾತನಾಡಿ, “ರೆಸ್ಟೋರೆಂಟ್ ಉದ್ಯಮವು ಯುವಕರು ಮತ್ತು ವೈವಿಧ್ಯಮಯ ಪ್ರತಿಭೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಆದರೆ ಹಲವು ಪ್ರತಿಭಾವಂತರು ಸಾಂಪ್ರದಾಯಿಕ ನೇಮಕಾತಿ ವ್ಯವಸ್ಥೆಯಿಂದ ಹೊರಗುಳಿಯುತ್ತಿದ್ದಾರೆ. ಮಿಟ್ಟಿ ಕೆಫೆಯೊಂದಿಗಿನ ಈ ಉದ್ಯೋಗ ಮೇಳವು ಅಂತಹ ಅಭ್ಯರ್ಥಿಗಳನ್ನು ನೇರವಾಗಿ ಉದ್ಯೋಗದಾತರೊಂದಿಗೆ ಸಂಪರ್ಕಿಸುವ ಮಹತ್ವದ ಹೆಜ್ಜೆಯಾಗಿದೆ,” ಎಂದರು.
“ಉದ್ಯೋಗದಾತರೂ ಸಹ ಸಾಮಾನ್ಯ ನೇಮಕಾತಿ ವ್ಯಾಪ್ತಿಯನ್ನು ಮೀರಿ ಪ್ರತಿಭೆಯನ್ನು ಗುರುತಿಸಬೇಕು. ಕೌಶಲ್ಯ, ಬದ್ಧತೆ ಮತ್ತು ಕೆಲಸದ ಮನೋಭಾವವೇ ಮುಖ್ಯ ಎಂಬ ದೃಷ್ಟಿಕೋನ ಬೆಳೆಸುವುದು ಅಗತ್ಯ,” ಎಂದು ಅವರು ಹೇಳಿದರು.
ಈ ಉದ್ಯೋಗ ಮೇಳದ ಮೂಲಕ 110ಕ್ಕೂ ಹೆಚ್ಚು ವಿಶೇಷ ಚೇತನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಲಾಗಿದ್ದು, ಆತಿಥ್ಯ ಕ್ಷೇತ್ರದಲ್ಲಿ ಸಮಾನ ಅವಕಾಶ, ವೈವಿಧ್ಯತೆ ಮತ್ತು ಒಳಗೊಳ್ಳುವಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಇದು ಗಮನಾರ್ಹ ಹೆಜ್ಜೆಯಾಗಿದೆ.
Read this:ಮುಸ್ಲಿಂ ಯುವಜನರ ಉದ್ಯಮಶೀಲತೆಗೆ ಹೊಸ ರೆಕ್ಕೆ: ಅಕ್ಟೋಬರ್ 31ರಂದು ‘ಉಡಾನ್–2026’ ಸಮಾವೇಶ






