ಬೆಂಗಳೂರು: ಹೆಚ್ಚುತ್ತಿರುವ ತಾಪಮಾನದಿಂದ ಬೆಂಗಳೂರಿನ ಪರಿಸರ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಎದುರಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಗರದಾದ್ಯಂತ ‘ಶಾಖ-ಆರೋಗ್ಯ ಪ್ರೋಟೋಕಾಲ್’ (Heat-Health Protocol) ಜಾರಿಗೊಳಿಸಿದೆ. ತೀವ್ರ ಶಾಖದ ಅಲೆ ಕಾಣಿಸಿಕೊಳ್ಳುವ ಮುನ್ನ, ಶಾಖದ ಅವಧಿಯಲ್ಲಿ ಮತ್ತು ನಂತರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ತುರ್ತು ಕ್ರಮಗಳಿಗೆ ಇದು ಮಾರ್ಗದರ್ಶನ ನೀಡಲಿದೆ.
ಕಳೆದ ದಶಕದಲ್ಲಿ ಬೆಂಗಳೂರಿನ ಸರಾಸರಿ ಗಾಳಿಯ ಉಷ್ಣಾಂಶವು ಪ್ರತಿ ಹತ್ತು ವರ್ಷಕ್ಕೆ ಸುಮಾರು 0.5°Cರಷ್ಟು ಏರಿಕೆಯಾಗಿದೆ. 2024ರ ಏಪ್ರಿಲ್ನಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಗರಿಷ್ಠ 40°C ತಾಪಮಾನ ದಾಖಲಾಗಿತ್ತು. ಹೀಗಾಗಿ ಬಿಸಿಲಿನ ತೀವ್ರತೆಯನ್ನು ಕೇವಲ ಬೇಸಿಗೆಯ ಸಮಸ್ಯೆಯಾಗಿ ನೋಡದೆ, ನಗರದ ಪರಿಸರ, ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ದೀರ್ಘಕಾಲೀನ ಸವಾಲಾಗಿ ಪರಿಗಣಿಸಲಾಗಿದೆ.
417 ಆರೋಗ್ಯ ಕೇಂದ್ರಗಳು, 162 ಕೂಲಿಂಗ್ ಸೆಂಟರ್ಗಳು
ಶಾಖದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತಕ್ಷಣದ ನೆರವು ಒದಗಿಸಲು ನಗರದಾದ್ಯಂತ 417 ಸರ್ಕಾರಿ ಆರೋಗ್ಯ ಕೇಂದ್ರಗಳನ್ನು ಗುರುತಿಸಲಾಗಿದೆ. ಇದರಲ್ಲಿ 162 ಇಂದಿರಾ ಕ್ಯಾಂಟೀನ್ಗಳನ್ನು ತಾತ್ಕಾಲಿಕ ‘ಕೂಲಿಂಗ್ ಸೆಂಟರ್’ಗಳಾಗಿ ಬಳಸಿಕೊಳ್ಳಲಾಗುವುದು. ಜತೆಗೆ 108 ನಮ್ಮ ಕ್ಲಿನಿಕ್ಗಳು, 140 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು (UPHC) ಮತ್ತು 7 ರೆಫರಲ್ ಆಸ್ಪತ್ರೆಗಳು ಶಾಖ-ಆರೋಗ್ಯ ವ್ಯವಸ್ಥೆಯ ಭಾಗವಾಗಿವೆ.
ಈ ಪ್ರೋಟೋಕಾಲ್ ಅನ್ನು C40 Cities, ಸೆನ್ಸಿಂಗ್ ಲೋಕಲ್, ಹಸಿರುದಳ ಹಾಗೂ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಸಂತು ಘೋಷ್ ಅವರ ಸಹಯೋಗದಲ್ಲಿ ಸಿದ್ಧಪಡಿಸಲಾಗಿದೆ.
‘ಬಿಸಿಲನ್ನು ನಿರ್ಲಕ್ಷಿಸಬೇಡಿ’
GBA ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಮಾತನಾಡಿ, ತೀವ್ರ ಶಾಖವು ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಮತ್ತು ಆಡಳಿತಕ್ಕೆ ಪ್ರಮುಖ ಸವಾಲಾಗಿ ಹೊರಹೊಮ್ಮುತ್ತಿದೆ. ಶಾಖದ ಅಲೆ ಎದುರಾಗುವ ಮುನ್ನವೇ ಸಿದ್ಧತೆ ಮಾಡಿಕೊಳ್ಳುವುದು ಮತ್ತು ಅಗತ್ಯ ಸಂದರ್ಭದಲ್ಲಿ ನಾಗರಿಕ ಹಾಗೂ ಆರೋಗ್ಯ ವ್ಯವಸ್ಥೆಗಳು ವೇಗವಾಗಿ ಸ್ಪಂದಿಸುವುದು ಮುಖ್ಯ ಉದ್ದೇಶವಾಗಿದೆ ಎಂದರು.
ನಗರದ ಎಲ್ಲಾ ಐದು ನಗರ ಪಾಲಿಕೆಗಳಲ್ಲಿ ಪ್ರೋಟೋಕಾಲ್ ಜಾರಿಯಾಗಲಿದ್ದು, ಮುಂಬರುವ ಬೇಸಿಗೆಗೂ ಮುನ್ನ ಅಧಿಕಾರಿಗಳನ್ನು ಸಜ್ಜುಗೊಳಿಸಲಾಗುವುದು. ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಕೈಗೊಂಡಿರುವ ಪ್ರಾಯೋಗಿಕ ಯೋಜನೆಗಳನ್ನು ಶೀಘ್ರದಲ್ಲೇ ನಗರದಾದ್ಯಂತ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಮಾತನಾಡಿ, ತೀವ್ರ ತಾಪಮಾನ ಈಗಾಗಲೇ ನಗರದ ವಾತಾವರಣ ಮತ್ತು ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ತೀವ್ರ ಶಾಖ ಪೀಡಿತ ಪ್ರದೇಶಗಳಲ್ಲಿ ‘ಹವಾಮಾನ ಮೇಲ್ವಿಚಾರಣಾ ಕೇಂದ್ರ’ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇವು ನಿಖರ ಮುನ್ಸೂಚನೆ ಮತ್ತು ದತ್ತಾಂಶ ಸಂಗ್ರಹಣೆಗೆ ನೆರವಾಗಲಿವೆ ಎಂದರು.
ಪರಿಸರ ಬದಲಾವಣೆಯ ನಡುವೆ ಆರೋಗ್ಯ ಕಾಪಾಡಿಕೊಳ್ಳಿ
C40 Cities ದಕ್ಷಿಣ ಮತ್ತು ಪಶ್ಚಿಮ ಏಷ್ಯಾದ ಪ್ರಾದೇಶಿಕ ನಿರ್ದೇಶಕ ನಯೀಮ್ ಕೆರುವಾಲಾ ಮಾತನಾಡಿ, ಶಾಖ-ಆರೋಗ್ಯ ಪ್ರೋಟೋಕಾಲ್ ಮೂಲಕ ಬೆಂಗಳೂರು ಸಾಕ್ಷ್ಯಾಧಾರಿತ ಹವಾಮಾನ ಕ್ರಮ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಗರ ಆಡಳಿತದೊಂದಿಗೆ ಜೋಡಿಸುವ ಮಾದರಿ ರೂಪಿಸಿದೆ ಎಂದರು.
ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರು ಸಹ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಬಿಸಿಲಿನ ತೀವ್ರ ಸಮಯದಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು, ಸಾಕಷ್ಟು ನೀರು ಕುಡಿಯುವುದು, ಹಗುರವಾದ ಉಡುಪು ಧರಿಸುವುದು ಮತ್ತು ತಲೆ ಸುತ್ತುವಿಕೆ, ಅತಿಯಾದ ಬೆವರು, ದೌರ್ಬಲ್ಯ ಮುಂತಾದ ಲಕ್ಷಣಗಳನ್ನು ನಿರ್ಲಕ್ಷಿಸದೆ ತಕ್ಷಣ ನೆರವು ಪಡೆಯುವುದು ಶಾಖದಿಂದ ಆರೋಗ್ಯ ಕಾಪಾಡಿಕೊಳ್ಳುವ ಪ್ರಮುಖ ಕ್ರಮಗಳಾಗಿವೆ.
ಕಾರ್ಯಕ್ರಮದಲ್ಲಿ FECC ವಿಶೇಷ ಆಯುಕ್ತ ಸುಶಮಾ ಗೋಡ್ಬೋಲೆ, C40 Cities, ಸೆನ್ಸಿಂಗ್ ಲೋಕಲ್, ಹಸಿರುದಳ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (KSDMA) ಪ್ರತಿನಿಧಿಗಳು ಉಪಸ್ಥಿತರಿದ್ದರು.
In this story
No ratings yet











