ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಗುಲಾಬಿ ಬೆಳಕಿನಲ್ಲಿ ಬೆಂಗಳೂರು
ವಿಧಾನಸೌಧ, ಟೌನ್ ಹಾಲ್ ಸೇರಿದಂತೆ ಪ್ರಮುಖ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ | ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆಯ ಮಹತ್ವ ಸಾರಲು RGUHS ವಿಶೇಷ ಉಪಕ್ರಮ
2min read
ಬೆಂಗಳೂರು: ಸ್ತನ ಕ್ಯಾನ್ಸರ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ಪ್ರಮುಖ ಸರ್ಕಾರಿ ಹಾಗೂ ಐತಿಹಾಸಿಕ ಕಟ್ಟಡಗಳು ಅಕ್ಟೋಬರ್ 29ರಂದು ಗುಲಾಬಿ ಬಣ್ಣದ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸಲಿವೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಈ ವಿಶೇಷ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಸ್ತನ ಕ್ಯಾನ್ಸರ್ನ ಆರಂಭಿಕ ಪತ್ತೆ, ಸಕಾಲಿಕ ಚಿಕಿತ್ಸೆ ಹಾಗೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯದ ಕುರಿತು ಸಂದೇಶ ಸಾರಲಿದೆ.
ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ. ಭಗವಾನ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ವಿಧಾನಸೌಧ, ಹಡ್ಸನ್ ವೃತ್ತ, ಟೌನ್ ಹಾಲ್, ಕಬ್ಬನ್ ಪಾರ್ಕ್ನ ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯ ಹಾಗೂ ರಾಜ್ಯ ವಸ್ತುಸಂಗ್ರಹಾಲಯ ಸೇರಿದಂತೆ ನಗರದ ಪ್ರಮುಖ ಕಟ್ಟಡಗಳಿಗೆ ಗುಲಾಬಿ ಬಣ್ಣದ ದೀಪಾಲಂಕಾರ ಮಾಡಲಾಗುವುದು ಎಂದು ತಿಳಿಸಿದರು.
“ನಗರದ ಪ್ರಮುಖ ಕಟ್ಟಡಗಳನ್ನು ಗುಲಾಬಿ ಬೆಳಕಿನಿಂದ ಪ್ರಕಾಶಮಾನಗೊಳಿಸುವ ಮೂಲಕ ಸ್ತನ ಕ್ಯಾನ್ಸರ್ ಜಾಗೃತಿಯ ಸಂದೇಶವನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪಿಸುವುದು ನಮ್ಮ ಉದ್ದೇಶ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಬೇಕು. ಸ್ತನಗಳಲ್ಲಿ ಕಂಡುಬರುವ ಅಸಹಜ ಬದಲಾವಣೆಗಳನ್ನು ನಿರ್ಲಕ್ಷಿಸದೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಬೇಕು” ಎಂದು ಅವರು ಹೇಳಿದರು.
ಆರಂಭಿಕ ಪತ್ತೆಯಿಂದ ಜೀವ ಉಳಿಸಲು ಸಾಧ್ಯ
ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ‘ಸ್ತನ ಕ್ಯಾನ್ಸರ್ ಜಾಗೃತಿ ಮಾಸ’ವಾಗಿ ಆಚರಿಸಲಾಗುತ್ತದೆ. ಸ್ತನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಆರಂಭಿಸಿದರೆ ಚಿಕಿತ್ಸೆಯ ಫಲಿತಾಂಶವನ್ನು ಉತ್ತಮಗೊಳಿಸುವುದರ ಜೊತೆಗೆ ಜೀವ ಉಳಿಸುವ ಸಾಧ್ಯತೆಯೂ ಹೆಚ್ಚುತ್ತದೆ ಎಂಬ ಸಂದೇಶವನ್ನು ಅಭಿಯಾನದ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ.
ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರಲ್ಲಿ ಸ್ವಯಂ ಆರೋಗ್ಯ ಕಾಳಜಿ, ನಿಯಮಿತ ತಪಾಸಣೆ ಹಾಗೂ ಅಗತ್ಯವಿದ್ದಾಗ ವೈದ್ಯರನ್ನು ಸಂಪರ್ಕಿಸುವ ಬಗ್ಗೆ ಅರಿವು ಮೂಡಿಸಲು ವಿಶ್ವವಿದ್ಯಾಲಯ ಒತ್ತು ನೀಡಿದೆ.
ಎಲ್ಲಾ ಸಂಯೋಜಿತ ಕಾಲೇಜುಗಳಲ್ಲೂ ಜಾಗೃತಿ ಕಾರ್ಯಕ್ರಮ
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಸೇರಿದಂತೆ ರಾಜ್ಯದ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಗಳ ಸಹಯೋಗದಲ್ಲಿ RGUHSಗೆ ಸಂಯೋಜಿತವಾಗಿರುವ ಕಾಲೇಜುಗಳಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಕಾರ್ಯಕ್ರಮದ ಮೂಲಕ ಸ್ತನಗಳಲ್ಲಿ ಕಂಡುಬರುವ ಅಸಹಜ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವುದು, ಅಗತ್ಯವಿರುವವರಿಗೆ ವೈದ್ಯಕೀಯ ಸಲಹೆ ನೀಡುವುದು ಹಾಗೂ ಸೂಕ್ತ ತಪಾಸಣೆಗೆ ಶಿಫಾರಸು ಮಾಡುವುದಕ್ಕೆ ಆದ್ಯತೆ ನೀಡಲಾಗುವುದು.
‘ಜಾಗೃತಿಯ ಬೆಳಕು, ಜೀವದ ಭರವಸೆ’
ಗುಲಾಬಿ ಬಣ್ಣವು ಜಾಗತಿಕವಾಗಿ ಸ್ತನ ಕ್ಯಾನ್ಸರ್ ಜಾಗೃತಿಯ ಸಂಕೇತವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಪ್ರಮುಖ ಕಟ್ಟಡಗಳನ್ನು ಗುಲಾಬಿ ಬೆಳಕಿನಲ್ಲಿ ಕಂಗೊಳಿಸುವ ಮೂಲಕ “ಆರಂಭಿಕ ಪತ್ತೆ–ಸಕಾಲಿಕ ಚಿಕಿತ್ಸೆ” ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವುದು ವಿಶ್ವವಿದ್ಯಾಲಯದ ಉದ್ದೇಶವಾಗಿದೆ.
Read this:ಮೂರು ವರ್ಷಗಳಲ್ಲಿ ₹850 ಕೋಟಿ ಮೌಲ್ಯದ ಮಾದಕ ವಸ್ತು ವಶ: ಪ್ರಿಯಾಂಕ್ ಖರ್ಗೆ









