ಬೆಂಗಳೂರು: ಗ್ರಾಮೀಣ ಭಾಗಗಳಲ್ಲಿ ತಜ್ಞ ವೈದ್ಯರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯದ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳು ತಲಾ ಒಂದು ತಾಲೂಕು ಆಸ್ಪತ್ರೆ, ಒಂದು ಸಮುದಾಯ ಆರೋಗ್ಯ ಕೇಂದ್ರ (CHC) ಹಾಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ (PHC) ಗಳನ್ನು ದತ್ತು ಪಡೆದು ಸೇವೆ ನೀಡುವಂತೆ ಆರೋಗ್ಯ ಇಲಾಖೆ Karnataka Health Department ಸೂಚಿಸಿದೆ.
ಮುಖ್ಯಮಂತ್ರಿಗಳ 100 ದಿನಗಳ ಕಾರ್ಯಕ್ರಮದ ಭಾಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಜಂಟಿಯಾಗಿ ಈ ಯೋಜನೆ ಜಾರಿಗೆ ತರಲಿವೆ.
ಈ ಯೋಜನೆಯಡಿ ಸ್ತ್ರೀರೋಗ ತಜ್ಞರು, ಅರವಳಿಕೆ ತಜ್ಞರು, ಮಕ್ಕಳ ತಜ್ಞರು, ಮೂಳೆ ತಜ್ಞರು ಸೇರಿದಂತೆ ವಿವಿಧ ತಜ್ಞ ವೈದ್ಯರ ಸೇವೆಯನ್ನು ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಒದಗಿಸಲಾಗುತ್ತದೆ. ಇದರಿಂದ ಜಿಲ್ಲಾ ಆಸ್ಪತ್ರೆಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಗೆ ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ಟೆಲಿಮೆಡಿಸಿನ್ ಸೇವೆಗಳು ಬಲಪಡಲಿವೆ.
ಆರೋಗ್ಯ ಇಲಾಖೆ ವೈದ್ಯಕೀಯ ಕಾಲೇಜುಗಳೊಂದಿಗೆ ಜಿಲ್ಲಾ ಮಟ್ಟದಲ್ಲಿ ಒಪ್ಪಂದ ಮಾಡಿಕೊಂಡು, ನೋಡಲ್ ಅಧಿಕಾರಿಗಳನ್ನು ನೇಮಿಸಲಿದೆ. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞರ ವಿಶೇಷ OPD ಕೊಠಡಿಗಳು, ರೋಗನಿರ್ಣಯ ಸೌಲಭ್ಯಗಳು, ಶಸ್ತ್ರಚಿಕಿತ್ಸಾ ಘಟಕಗಳು ಮತ್ತು ಅಗತ್ಯ ಸಿಬ್ಬಂದಿ ವ್ಯವಸ್ಥೆ ಮಾಡಲಾಗುತ್ತದೆ.
ಇದಲ್ಲದೆ 108 ಆರೋಗ್ಯ ಕವಚ ಮೂಲಕ ತುರ್ತು ಸಾರಿಗೆ, ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆ ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ರೋಗಿಗಳ ಪೂರ್ವ ನೋಂದಣಿ ವ್ಯವಸ್ಥೆ ಕಲ್ಪಿಸಲಾಗುತ್ತದೆ.
ವೈದ್ಯಕೀಯ ಶಿಕ್ಷಣ ಇಲಾಖೆ ಸಲಹೆಗಾರ ವೈದ್ಯರು, ಹಿರಿಯ ನಿವಾಸಿ ವೈದ್ಯರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಿಗದಿತ ಅವಧಿಯಲ್ಲಿ ನಿಯೋಜಿಸಲಿದೆ. ಗ್ರಾಮೀಣ ಆರೋಗ್ಯ ಸಮಸ್ಯೆಗಳ ಕುರಿತು ತರಬೇತಿ, ಟೆಲಿಮೆಡಿಸಿನ್ ಸೇವೆ ಹಾಗೂ ಸಂಶೋಧನೆಗೂ ಒತ್ತು ನೀಡಲಾಗುತ್ತದೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಸಮಿತಿ ಪ್ರತಿ ತಿಂಗಳು ಯೋಜನೆಯ ಪ್ರಗತಿ ಪರಿಶೀಲಿಸಿ, ವೈದ್ಯಕೀಯ ಕಾಲೇಜುಗಳು ಮತ್ತು ಆರೋಗ್ಯ ಇಲಾಖೆಯ ನಡುವಿನ ಸಮನ್ವಯವನ್ನು ನೋಡಿಕೊಳ್ಳಲಿದೆ.
In this story
No ratings yet











