- Home
- Karnataka
- Bengaluru Urban
- Education
ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅವರು ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ಚಂದ್ ಗೆಹೋಟ್ ಅವರು ಈ ನೇಮಕಕ್ಕೆ ಆದೇಶ ಹೊರಡಿಸಿದ್ದಾರೆ.
ಡಾ. ಮಮತಾ ಬಿ. ಅವರು ಈ ಹಿಂದೆ ವಿ.ಎಚ್.ಡಿ. ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ನ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದುವರೆಗೆ ಪ್ರಭಾರ ಕುಲಪತಿಯಾಗಿದ್ದ ಎಸ್.ಬಿ. ಅಶೋಕ್ ಅವರ ಅವಧಿ ಸೆ.19ಕ್ಕೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಡಾ. ಮಮತಾ ಬಿ. ಅವರನ್ನು ನೇಮಕ ಮಾಡಲಾಗಿದೆ.
ನೇಮಕ ಆದೇಶವು ಸೆ.19ರಿಂದಲೇ ಜಾರಿಗೆ ಬಂದಿದ್ದು, ಡಾ. ಮಮತಾ ಬಿ. ಅವರ ಪ್ರಭಾರ ಕುಲಪತಿ ಅವಧಿ 2027ರ ಏಪ್ರಿಲ್ 2ರವರೆಗೆ ಇರಲಿದೆ.
ಹೋಮ್ ಸೈನ್ಸ್ ಕ್ಷೇತ್ರದಲ್ಲಿ ದೀರ್ಘ ಅನುಭವ
ಹೋಮ್ ಸೈನ್ಸ್ನ ಫ್ಯಾಮಿಲಿ ರಿಸೋರ್ಸ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಪರಿಣತಿ ಹೊಂದಿರುವ ಡಾ. ಮಮತಾ ಬಿ. ಅವರು 29 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಇವರು 25ಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳನ್ನು ಹೊರತಂದಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ 20ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಇದಲ್ಲದೆ ಸಂಪಾದಿತ ಪುಸ್ತಕಗಳಲ್ಲಿ ಐದು ಅಧ್ಯಾಯಗಳನ್ನು ಪ್ರಕಟಿಸಿದ್ದು, ನಾಲ್ವರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಯುಜಿಸಿ ಪ್ರಾಯೋಜಿತ ಮೈನರ್ ಸಂಶೋಧನಾ ಯೋಜನೆಯೊಂದನ್ನು ಪೂರ್ಣಗೊಳಿಸಿರುವ ಅವರು, ಪ್ರಸ್ತುತ ವಿಶ್ವವಿದ್ಯಾಲಯದ ಹೋಮ್ ಸೈನ್ಸ್ ಪದವಿ ವಿಭಾಗದ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವಿಧ ವಿವಿಗಳಲ್ಲಿ ಶೈಕ್ಷಣಿಕ ಜವಾಬ್ದಾರಿ
ಡಾ. ಮಮತಾ ಬಿ. ಅವರು ಬೆಂಗಳೂರು ನಗರ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ, ನಿಟ್ಟೆ ವಿಶ್ವವಿದ್ಯಾಲಯ ಹಾಗೂ ಮೌಂಟ್ ಕಾರ್ಮೆಲ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ ಮತ್ತು ಬೋರ್ಡ್ ಆಫ್ ಸ್ಟಡೀಸ್ಗಳಲ್ಲಿ ಅಧ್ಯಕ್ಷೆ ಹಾಗೂ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ನಿಕಟಪೂರ್ವ ಪ್ರಭಾರ ಕುಲಪತಿ ಡಾ. ಅಶೋಕ್ ಎಸ್.ಬಿ., ಮೌಲ್ಯಮಾಪನ ಕುಲಸಚಿವ ಪ್ರೊ. ವೈ. ರಮೇಶ್, ಆಡಳಿತ ಕುಲಸಚಿವೆ ಶ್ರೀಮತಿ ಸೀಮಾ ಬಿ. ನಾಯಕ್, ಪ್ರೊ. ಆರ್.ಕೆ. ವಾಣಿಶ್ರೀ ಸೇರಿದಂತೆ ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
No ratings yet











