ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು ರಾಷ್ಟ್ರೀಯ ಜನಗಣತಿ–2027 ಕಾರ್ಯಕ್ಕೆ ಗೈರುಹಾಜರಾಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರದೇಶದೊಳಗಿನ ಈ ಮಹತ್ವದ ಮನೆಪಟ್ಟಿ ಹಾಗೂ ವಸತಿ ಗಣತಿ ಕಾರ್ಯವು ಏಪ್ರಿಲ್ 16ರಿಂದ ಮೇ 15ರವರೆಗೆ ನಡೆಯಲಿದ್ದು, ಈ ಕಾರ್ಯಕ್ಕಾಗಿ 4,678 ಗಣತಿದಾರರು ಮತ್ತು 798 ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ತರಬೇತಿ ಕಡ್ಡಾಯ
ಜನಗಣತಿ ಸಿಬ್ಬಂದಿಗೆ ಏಪ್ರಿಲ್ 6ರಿಂದ 8ರವರೆಗೆ ಒಟ್ಟು 16 ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ತರಬೇತಿ ಸ್ಥಳ ಹಾಗೂ ದಿನಾಂಕಗಳನ್ನು ನಿಗದಿಪಡಿಸಲಾಗಿದ್ದು, ಎಲ್ಲಾ ಸಿಬ್ಬಂದಿಯೂ ಕಡ್ಡಾಯವಾಗಿ ಹಾಜರಾಗಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.
ಗೈರುಹಾಜರಿಗೆ ಕಠಿಣ ಕ್ರಮ
ತರಬೇತಿ ಅಥವಾ ಜನಗಣತಿ ಕಾರ್ಯಕ್ಕೆ ಗೈರಾಗುವ ಸಿಬ್ಬಂದಿ ವಿರುದ್ಧ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ:
- ಜನಗಣತಿ ಕಾಯ್ದೆ, 1948ರ ಸೆಕ್ಷನ್ 11ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಕೆ
- ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023ರ ಕಲಂ 223ರಡಿ ಪ್ರಥಮ ವರ್ತಮಾನ ವರದಿ (ಎಫ್‌ಐಆರ್ (FIR)) ದಾಖಲಿಕೆ
- ದುರ್ನಡತೆ ಹಾಗೂ ಅವಿಧೇಯತೆಗಾಗಿ ಅಮಾನತ್ತು ಮತ್ತು ಶಿಸ್ತು ಕ್ರಮ
- ಅನಧಿಕೃತ ಗೈರುಹಾಜರಿಯನ್ನು ಡೈಸ್-ನಾನ್ (Dies-non) ಎಂದು ಪರಿಗಣನೆ
ಜನಗಣತಿ ಕಾರ್ಯವು ರಾಷ್ಟ್ರದ ಅಭಿವೃದ್ಧಿಗೆ ಅತ್ಯಂತ ಮಹತ್ವದ್ದಾಗಿರುವುದರಿಂದ, ಎಲ್ಲ ಸಿಬ್ಬಂದಿಯೂ ಜವಾಬ್ದಾರಿಯಿಂದ ಪಾಲ್ಗೊಳ್ಳಬೇಕು ಎಂದು ಆಯುಕ್ತ ಕೆ.ಎನ್. ರಮೇಶ್ ಮನವಿ ಮಾಡಿದ್ದಾರೆ.




