ಬೆಂಗಳೂರು: ಬೆಂಗಳೂರು ಕೇಂದ್ರ ನಗರ ಪಾಲಿಕೆ ವತಿಯಿಂದ ಸ್ವಚ್ಛ ಸರ್ವೇಕ್ಷಣ್ (Swachh Survekshan) 2025-26ರ ಅಂಗವಾಗಿ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ನಗರದ ವಿವಿಧ ಪ್ರದೇಶಗಳಲ್ಲಿನ 30 ದೇವಸ್ಥಾನಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಆಯುಕ್ತರಾದ ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ಕಾರ್ಯಯೋಜನೆಯ 3ನೇ ಹಂತದಲ್ಲಿ ಸ್ವಚ್ಛತಾ ಅಭಿಯಾನ
ನಗರದಲ್ಲಿ ಸ್ವಚ್ಛತೆ ಕಾಪಾಡುವುದು ಹಾಗೂ ತ್ಯಾಜ್ಯಮುಕ್ತ ನಗರ ನಿರ್ಮಾಣದ ಉದ್ದೇಶದಿಂದ ರೂಪಿಸಲಾದ ಕಾರ್ಯಯೋಜನೆಯ (ಆ್ಯಕ್ಷನ್ ಪ್ಲಾನ್) ಮೂರನೇ ಹಂತವಾಗಿ ಈ ಅಭಿಯಾನ ಕೈಗೊಳ್ಳಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಉತ್ತಮ ಸ್ಥಾನ ಪಡೆಯುವ ಗುರಿಯೊಂದಿಗೆ ಈ ಕ್ರಮ ಅನುಷ್ಠಾನಗೊಳಿಸಲಾಗಿದೆ.
ಧಾರ್ಮಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ
ದೇವಸ್ಥಾನಗಳಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುವುದರಿಂದ, ಆ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಶುಚಿಗೊಳಿಸುವುದರೊಂದಿಗೆ ಸಾರ್ವಜನಿಕರಲ್ಲಿ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಪ್ರಮುಖ ದೇವಸ್ಥಾನಗಳ ಸ್ವಚ್ಛತೆ
ಈ ಅಭಿಯಾನದ ಅಂಗವಾಗಿ ಹಲವು ಪ್ರಮುಖ ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದೆ. ಅವುಗಳಲ್ಲಿ:
- ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ
- ಹೊಂಬೇಗೌಡನಗರದ ಶ್ರೀ ಆಂಜನೇಯ ದೇವಸ್ಥಾನ
- ಸಿದ್ಧಾಪುರದ ಶ್ರೀರಾಮ ದೇವಸ್ಥಾನ
- ವಿವಿಪುರಂ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ
- ಗುಟ್ಟಹಳ್ಳಿ ಶ್ರೀ ಶಿವಶಂಕರ ದೇವಸ್ಥಾನ
- ಸುಧಾಮನಗರದ ಶ್ರೀ ಗಣೇಶ ದೇವಸ್ಥಾನ
- ಚಾಮರಾಜಪೇಟೆಯ ಶ್ರೀ ರಾಮೇಶ್ವರ ದೇವಸ್ಥಾನ
- ರಾಯಪುರಂನ ಶ್ರೀ ಕಲ್ಲು ನಾಗರ ದೇವಸ್ಥಾನ
- ಶಿವಾಜಿನಗರದ ಶ್ರೀ ಮುತ್ಯಾಲಮ್ಮ ದೇವಸ್ಥಾನ
- ಜಿಬಿಎ ಕೇಂದ್ರ ಕಚೇರಿ ಆವರಣದ ಸಪ್ತಮಾತ್ರಕಾ ಶ್ರೀ ಆದಿಪರಾಶಕ್ತಿ ದೇವಸ್ಥಾನ
- ಸಿ.ವಿ. ರಾಮನ್ ನಗರದ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನ
- ಸೇರಿದಂತೆ ಇನ್ನಿತರ ದೇವಸ್ಥಾನಗಳು
3 ಟನ್ ತ್ಯಾಜ್ಯ ತೆರವು
ಸ್ವಚ್ಛತಾ ಕಾರ್ಯದ ವೇಳೆ ಸುಮಾರು 3 ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಗಿದ್ದು, ದೇವಸ್ಥಾನಗಳ ಸುತ್ತಮುತ್ತ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗಿದೆ.
545 ಸಿಬ್ಬಂದಿಗಳು ಭಾಗಿ
ಈ ಸ್ವಚ್ಛತಾ ಅಭಿಯಾನದಲ್ಲಿ ಒಟ್ಟು 545 ಮಂದಿ ಸಿಬ್ಬಂದಿಗಳು ಭಾಗಿ ಆಗಿದ್ದರು. ಇದರಲ್ಲಿ 442 ಪೌರ ಕಾರ್ಮಿಕರು ಹಾಗೂ 105 ಅಧಿಕಾರಿಗಳು, ಸ್ವಚ್ಛತಾ ಸಿಬ್ಬಂದಿಗಳು ಮತ್ತು ಆಟೋ ಟಿಪ್ಪರ್ ಚಾಲಕರು ಸೇರಿದ್ದರು.
ಮೇಲುಸ್ತುವಾರಿ ಮತ್ತು ಭಾಗವಹಿಸಿದವರು
ಅಭಿವೃದ್ಧಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರ ಮೇಲುಸ್ತುವಾರಿಯಲ್ಲಿ ನಡೆದ ಈ ಕಾರ್ಯದಲ್ಲಿ ಡಿಜಿಎಂ ಭೀಮೇಶ್ ನಾಯಕ್, ವಿವಿಧ ವಿಭಾಗಗಳ ಎಜಿಎಂಗಳು, ಪೌರಕಾರ್ಮಿಕರು ಹಾಗೂ ಇತರ ಸಿಬ್ಬಂದಿಗಳು ಸಕ್ರಿಯವಾಗಿ ಭಾಗಿ ಆಗಿದ್ದರು.
ನಗರದ ಸ್ವಚ್ಛತೆ ಕಾಪಾಡುವುದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಅಭಿಯಾನಗಳು ಮುಂದುವರಿಯಲಿವೆ ಎಂದು ಪಾಲಿಕೆ ತಿಳಿಸಿದೆ.




