ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳ ಸಂಘಟನೆಗಳ ಒಕ್ಕೂಟವು ಸರ್ಕಾರ ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಈಡೇರಿಸದಿರುವುದನ್ನು ಖಂಡಿಸಿ ರಾಜ್ಯಮಟ್ಟದ ಹೋರಾಟಕ್ಕೆ ಮುಂದಾಗಿದೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಏಪ್ರಿಲ್ 8ರಿಂದ ಚಿತ್ರದುರ್ಗದಿಂದ ಪಾದಯಾತ್ರೆ ಆರಂಭಿಸಿ, ಏಪ್ರಿಲ್ 21ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ತಲುಪಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದೆ.
ಸಾರಿಗೆ ನೌಕರರು ಪ್ರತಿದಿನ ಒಂದು ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದ್ದು, ಸುಮಾರು 1.15 ಲಕ್ಷ ನೌಕರರು ಮಳೆ, ಗಾಳಿ, ಬಿಸಿಲು ಎನ್ನದೆ ದುಡಿಯುತ್ತಿರುವುದಾಗಿ ಒಕ್ಕೂಟ ತಿಳಿಸಿದೆ. ಹಬ್ಬ-ಹರಿದಿನಗಳಲ್ಲಿಯೂ ಕುಟುಂಬದಿಂದ ದೂರವಿದ್ದು ಕಾರ್ಯನಿರ್ವಹಿಸುವ ನೌಕರರಿಗೆ, ಇತರ ಸರ್ಕಾರಿ ನೌಕರರೊಂದಿಗೆ ಹೋಲಿಸಿದರೆ ಕಡಿಮೆ ವೇತನ ಹಾಗೂ ಸೌಲಭ್ಯಗಳ ಕೊರತೆ ಎದುರಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜಾರಿಗೆ ತಂದ ಸಂದರ್ಭದಲ್ಲಿ ಬಸ್‌ಗಳ ಹಾಗೂ ಸಿಬ್ಬಂದಿ ಕೊರತೆ ಇದ್ದರೂ, ನೌಕರರು ಹೆಚ್ಚು ಒತ್ತಡದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಇದರ ಪರಿಣಾಮವಾಗಿ ಶಕ್ತಿ ಯೋಜನೆ ದೊಡ್ಡ ಯಶಸ್ಸು ಸಾಧಿಸಿ, ಮಹಿಳಾ ಪ್ರಯಾಣಿಕರಿಂದ ನೂರಾರು ಕೋಟಿಗಳ ಪ್ರಯಾಣ ದಾಖಲೆ ನಿರ್ಮಾಣವಾಗಿದ್ದು, ಸರ್ಕಾರಕ್ಕೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ ಎಂದು ಒಕ್ಕೂಟ ಹೇಳಿದೆ.
ಆದರೆ, ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ವರ್ಷಗಳು ಕಳೆದರೂ, ಮುಖ್ಯಮಂತ್ರಿ, ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ಸಭೆಗಳು ನಡೆದಿದ್ದರೂ ನೌಕರರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಬೇಸರ ವ್ಯಕ್ತವಾಗಿದೆ. ಇದರ ಪರಿಣಾಮವಾಗಿ ನೌಕರರು ದಿನನಿತ್ಯದ ಅಗತ್ಯತೆಗಳು, ಮಕ್ಕಳ ಶಿಕ್ಷಣ ಸೇರಿದಂತೆ ವಿವಿಧ ಖರ್ಚುಗಳನ್ನು ನಿಭಾಯಿಸಲು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದೆ.
ಈ ಹಿನ್ನೆಲೆದಲ್ಲಿ, ಏಪ್ರಿಲ್ 8ರಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಅಲ್ಲಿಂದಲೇ ಪಾದಯಾತ್ರೆ ಆರಂಭಿಸಿ ಏಪ್ರಿಲ್ 21ರಂದು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ. ಹೋರಾಟಕ್ಕೆ ಮಾಧ್ಯಮಗಳು ಬೆಂಬಲ ನೀಡಿ ಸರ್ಕಾರದ ಗಮನ ಸೆಳೆಯುವಂತೆ ಒಕ್ಕೂಟ ಮನವಿ ಮಾಡಿದೆ.
ಪ್ರಮುಖ ಬೇಡಿಕೆಗಳು:
- ಸರ್ಕಾರ ಚುನಾವಣಾ ಪೂರ್ವ ನೀಡಿದ ಭರವಸೆಯಂತೆ ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಸಮಾನ ವೇತನ (7ನೇ ವೇತನ ಆಯೋಗ ಮಾದರಿ)ವನ್ನು 01/01/2024ರಿಂದ ಜಾರಿಗೆ ತರುವುದು
- 01/01/2020ರಿಂದ ಅನ್ವಯವಾಗುವ ವೇತನ ಪರಿಷ್ಕರಣೆಯ 38 ತಿಂಗಳ ಹಿಂಬಾಕಿ ಪಾವತಿಸುವುದು (ಈಗಾಗಲೇ 26 ತಿಂಗಳು ಘೋಷಣೆ; ಉಳಿದ 12 ತಿಂಗಳು ಪಾವತಿ)
- ಸಾರಿಗೆ ನಿಗಮಗಳಲ್ಲಿ ಸಂಘಗಳ ಮಾನ್ಯತೆಗಾಗಿ ಕಾರ್ಮಿಕ ಸಂಘಟನೆಗಳ ಚುನಾವಣೆಯನ್ನು ತಕ್ಷಣ ನಡೆಸುವುದು




