ಚಿತ್ರದುರ್ಗ: ಇದೇ ತಿಂಗಳ 24 ರಂದು ಒಳ ಮೀಸಲಾತಿಯ ಹಂಚಿಕೆ ಮಾಡಿಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಭರವಸೆಯನ್ನು ಅನುಸರಿಸಿ, ಅದರಂತೆ ಹಂಚಿಕೆ ಮಾಡಬೇಕು. ಅದುವರೆಗೆ ಕೃಷಿ ಇಲಾಖೆಯಲ್ಲಿ ಕರೆಯಲಾಗಿರುವ ಅಧಿಕಾರಿ ಹುದ್ದೆಗಳ ಭರ್ತಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕೆಂದು ಮಾಜಿ ಸಚಿವ ಹೆಚ್. ಆಂಜನೇಯ ಒತ್ತಾಯಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೊಟ್ಟ ಮಾತಿನಂತೆ ಶೇ. 50 ಮೀಸಲಾತಿಯಲ್ಲಿ ನಮಗೆ ಶೇ. 6 ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಉಳಿದ ಸಮುದಾಯಗಳಿಗೂ ನ್ಯಾಯಯುತವಾಗಿ ಹಂಚಿಕೆ ಮಾಡಬೇಕು ಎಂದು ಹೇಳಿದರು.
ಇದಲ್ಲದೆ, ಅಲೆಮಾರಿ ಜನಾಂಗಕ್ಕೂ ಶೇ. 1 ಮೀಸಲಾತಿ ನೀಡುವಂತೆ ಅವರು ಒತ್ತಾಯಿಸಿದರು. ಒಳ ಮೀಸಲಾತಿ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 24 ರಂದು ನಿರ್ಧಾರ ಕೈಗೊಳ್ಳುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ಯಾರೂ ಸಹ ಅನಗತ್ಯ ಹೋರಾಟಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದರು.




