ಬೆಂಗಳೂರು: ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಆಸ್ತಿಗಳನ್ನು ಹರಾಜು ಮಾಡುವ ಮೊದಲು, ಕೋಟ್ಯಾಂತರ ರೂಪಾಯಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಅಧ್ಯಕ್ಷರು, ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಹಾಗೂ ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕರು ರಮೇಶ್ ಎನ್.ಆರ್. ಆಗ್ರಹಿಸಿದರು.
“ಮೊದಲು ಸರ್ಕಾರದ ಕಟ್ಟಡಗಳ ವಿರುದ್ಧ ಕ್ರಮ ಆಗಲಿ”
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ವಿಧಾನಸೌಧ, ವಿಕಾಸಸೌಧ, ರಾಜ ಭವನ, ಕುಮಾರ ಕೃಪ ಅತಿಥಿ ಗೃಹ ಹಾಗೂ ಬಹು ಮಹಡಿ ಕಟ್ಟಡಗಳಂತಹ ಆಡಳಿತ ಶಕ್ತಿ ಕೇಂದ್ರಗಳೇ ಕೋಟ್ಯಾಂತರ ರೂಪಾಯಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿವೆ. ಇಂತಹ ಸಂದರ್ಭದಲ್ಲೇ ಸಾಮಾನ್ಯ ಜನರ ಆಸ್ತಿಗಳನ್ನು ಹರಾಜು ಹಾಕುವುದು ನ್ಯಾಯಸಮ್ಮತವಲ್ಲ” ಎಂದು ಹೇಳಿದರು.
₹472 ಕೋಟಿಗೂ ಹೆಚ್ಚು ಬಾಕಿ
“2025ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಬೆಂಗಳೂರು ಮಹಾನಗರದಲ್ಲಿರುವ ಸರ್ಕಾರಿ ಕಟ್ಟಡಗಳು ಒಟ್ಟು ₹472.66 ಕೋಟಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿವೆ. ಇದರಲ್ಲಿ ಪೂರ್ವ ವಲಯದಲ್ಲೇ ₹246.39 ಕೋಟಿ ಬಾಕಿ ಇದೆ. ಯಲಹಂಕ, ರಾಜರಾಜೇಶ್ವರಿ ನಗರ, ಮಹದೇವಪುರ ಸೇರಿದಂತೆ ಎಲ್ಲಾ ವಲಯಗಳಲ್ಲಿಯೂ ಭಾರೀ ಪ್ರಮಾಣದ ಬಾಕಿ ಉಳಿದಿದೆ” ಎಂದು ಅವರು ವಿವರಿಸಿದರು.
“18 ವರ್ಷಗಳಿಂದ ತೆರಿಗೆ ಪಾವತಿ ಇಲ್ಲ”
“2008-09ರಿಂದಲೇ ಈ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳು ಸೇವಾ ತೆರಿಗೆ ಪಾವತಿಸದೆ, ಪಾಲಿಕೆಗೆ ಭಾರೀ ನಷ್ಟ ಉಂಟುಮಾಡಿವೆ. ಸರ್ಕಾರದ ಇಲಾಖೆಗಳೇ ನಿಯಮ ಉಲ್ಲಂಘನೆ ಮಾಡುತ್ತಿರುವುದು ಗಂಭೀರ ವಿಷಯ” ಎಂದು ರಮೇಶ್ ಎನ್.ಆರ್. ಕಿಡಿಕಾರಿದರು.
“ಸಾಮಾನ್ಯರ ಮೇಲೆ ಮಾತ್ರ ಕಠಿಣ ಕ್ರಮ”
“ಐಟಿ-ಬಿಟಿ ಕಂಪನಿಗಳು, ಟೆಕ್ ಪಾರ್ಕ್‌ಗಳು, ದೊಡ್ಡ ಮಾಲ್‌ಗಳಿಂದ ತೆರಿಗೆ ವಸೂಲಿ ಮಾಡಲು ಹಿಂದೇಟು ಹಾಕುವ ಅಧಿಕಾರಿಗಳು, ಕಡಿಮೆ ಮೊತ್ತದ ಬಾಕಿ ಇರುವ ಮಧ್ಯಮ ವರ್ಗದವರ ಮನೆಗಳನ್ನು ಮಾತ್ರ ಹರಾಜು ಹಾಕುತ್ತಿದ್ದಾರೆ. ಇದು ತುಘಲಕ್ ದರ್ಬಾರ್‌ಗೆ ಸಮಾನ” ಎಂದು ಅವರು ಆರೋಪಿಸಿದರು.
“ಜಪ್ತಿ ಮಾಡಲು ಧೈರ್ಯ ತೋರಲಿ”
“ನಿಜಕ್ಕೂ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ, ₹473 ಕೋಟಿ ಸೇವಾ ತೆರಿಗೆ ಬಾಕಿ ಉಳಿಸಿಕೊಂಡಿರುವ ಸರ್ಕಾರಿ ಕಟ್ಟಡಗಳನ್ನು ಜಪ್ತಿ ಮಾಡಲು ಮುಂದಾಗಬೇಕು. ಅಗತ್ಯವಿದ್ದರೆ ಡಿಮ್ಯಾಂಡ್ ನೋಟಿಸ್ ಹಾಗೂ ಲೀಗಲ್ ನೋಟಿಸ್ ನೀಡಿ, ಒಂದು ದಿನವಾದರೂ ಕಟ್ಟಡಗಳಿಗೆ ಬೀಗ ಹಾಕುವ ಕ್ರಮ ಕೈಗೊಳ್ಳಲಿ” ಎಂದು ಅವರು ಒತ್ತಾಯಿಸಿದರು.
“ಒಂದೇ ನಿಯಮ ಎಲ್ಲರಿಗೂ ಅನ್ವಯಿಸಬೇಕು”
“ಬಡವರು, ಶ್ರೀಮಂತರು ಮತ್ತು ಆಡಳಿತ ವ್ಯವಸ್ಥೆಯಲ್ಲಿರುವ ಎಲ್ಲರಿಗೂ ಒಂದೇ ನಿಯಮ ಅನ್ವಯಿಸಬೇಕು. ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ಪಾಲಿಕೆಯ ಮೇಲಿದೆ” ಎಂದು ರಮೇಶ್ ಎನ್.ಆರ್. ಹೇಳಿದರು.




