ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ನಗರ ಮೂಲಸೌಕರ್ಯ ಸುಧಾರಣೆಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪ್ರತಿ ನಗರ ಪಾಲಿಕೆಗೆ ಒಂದೊಂದು ರಸ್ತೆ ಗುಂಡಿ ಮುಚ್ಚುವ ಯಂತ್ರವನ್ನು ಖರೀದಿಸಲು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ವಿವಿಧ ಇಲಾಖೆಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ರಸ್ತೆಗಳನ್ನು ಕತ್ತರಿಸಿ ಪುನಶ್ಚೇತನ ಮಾಡದೇ ಇರುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಪಾಲಿಕೆಯೇ ದುರಸ್ತಿ ಕಾರ್ಯ ನಡೆಸಿ ಅದರ ವೆಚ್ಚವನ್ನು ಸಂಬಂಧಿತ ಸಂಸ್ಥೆಗಳಿಂದ ವಸೂಲಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ರಸ್ತೆ ಕತ್ತರಿಕೆ ನಿಯಂತ್ರಣಕ್ಕೆ ಕ್ರಮ
ನಗರದಲ್ಲಿ ಕಾಮಗಾರಿಗಳಿಗಾಗಿ ರಸ್ತೆ ಕತ್ತರಿಸಲು ಮಾರ್ಕ್ಸ್ ಸಾಫ್ಟ್‌ವೇರ್ (Marks Software) ಮೂಲಕ ಸಲ್ಲಿಸುವ ಅರ್ಜಿಗಳಿಗೆ ತ್ವರಿತ ಅನುಮತಿ ನೀಡಬೇಕು. ಜೊತೆಗೆ, ಕಾಮಗಾರಿ ಪೂರ್ಣಗೊಂಡ ತಕ್ಷಣವೇ ರಸ್ತೆ ಪುನಶ್ಚೇತನ ಕಾರ್ಯವನ್ನು ಸಂಬಂಧಪಟ್ಟ ಸಂಸ್ಥೆಗಳ ಮೂಲಕವೇ ಮಾಡಿಸಬೇಕೆಂದು ಸೂಚಿಸಿದರು.
ಅನಾಥ ವಾಹನಗಳ ತೆರವಿಗೆ ಟೋಯಿಂಗ್ ಕಾರ್ಯ
ನಗರದ ರಸ್ತೆ ಬದಿಗಳಲ್ಲಿ ತಿಂಗಳಾಂತರ ನಿಲ್ಲಿಸಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ನಾಳೆಯಿಂದಲೇ ಟೋಯಿಂಗ್ ಕಾರ್ಯ ಆರಂಭಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಉತ್ತರ ಮತ್ತು ಕೇಂದ್ರ ನಗರ ಪಾಲಿಕೆಗಳಿಂದ ಟೋಯಿಂಗ್ ವಾಹನಗಳನ್ನು ಸಂಚಾರಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಅನಾಥ ವಾಹನಗಳಿರುವ ರಸ್ತೆಪಟ್ಟಿಯನ್ನು ನೀಡಿರುವ ಹಿನ್ನೆಲೆ, ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.
ಇದೇ ವೇಳೆ, ವೈಟ್ ಟಾಪಿಂಗ್ (White Topping) ಹಾಗೂ ಪ್ರಮುಖ ಕಾಂಕ್ರೀಟ್ ರಸ್ತೆಗಳಲ್ಲಿ ನಿಗದಿತ ಪಾರ್ಕಿಂಗ್ ಬೇ ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆ ವಾಹನ ನಿಲುಗಡೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ.
ಮುಂಗಾರು ಪೂರ್ವ ಸಿದ್ಧತೆ: ಹೂಳೆತ್ತುವ ಕಾರ್ಯಕ್ಕೆ ವೇಗ
ಮುಂಗಾರು ಮಳೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ರಾಜಕಾಲುವೆಗಳು ಮತ್ತು ರಸ್ತೆ ಬದಿಯ ಶೋಲ್ಡರ್ ಡ್ರೈನ್‌ಗಳಲ್ಲಿ ಹೂಳೆತ್ತುವ ಕಾರ್ಯವನ್ನು ತ್ವರಿತಗೊಳಿಸಲು ಸೂಚಿಸಲಾಗಿದೆ. ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆಯನ್ನು ತಪ್ಪಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.
ಹೆಬ್ಬಾಳ ಜಂಕ್ಷನ್ ಅಭಿವೃದ್ಧಿಗೆ ಸಮಗ್ರ ಯೋಜನೆ
ಹೆಬ್ಬಾಳ ಜಂಕ್ಷನ್‌ನಲ್ಲಿ ಟನಲ್ ರಸ್ತೆ, ಕೆಳಸೇತುವೆ, ಮೆಟ್ರೋ ಮತ್ತು ಸಬ್-ಅರ್ಬನ್ ರೈಲು ಯೋಜನೆಗಳು ನಡೆಯುತ್ತಿರುವ ಹಿನ್ನೆಲೆ, ಎಲ್ಲಾ ಸಂಬಂಧಿತ ಇಲಾಖೆಗಳು ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ಸಮಗ್ರ ನಕ್ಷೆ ಸಿದ್ಧಪಡಿಸಬೇಕು. ನಂತರ ಸಮಗ್ರ ಸಭೆ ಆಯೋಜಿಸಿ ಯೋಜನೆಗಳನ್ನು ಜಾರಿಗೊಳಿಸಲು ಸೂಚಿಸಿದರು.
ಕೆ-100 ಜಲಮಾರ್ಗದಲ್ಲಿ ಕೊಳಚೆ ನೀರು ತಡೆಗೆ ಸೂಚನೆ
ಕೆ-100 ಜಲಮಾರ್ಗಕ್ಕೆ ಕೆಲವು ಪ್ರದೇಶಗಳಿಂದ ಇನ್ನೂ ಕೊಳಚೆ ನೀರು ಸೇರುತ್ತಿರುವುದು ಗಮನಕ್ಕೆ ಬಂದಿದ್ದು, ಇದನ್ನು ಸಂಪೂರ್ಣವಾಗಿ ತಡೆಯಲು ಜಲಮಂಡಳಿ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಬಿಡಿಎ ಆಯುಕ್ತ ಮಣಿವಣ್ಣನ್, ವಿವಿಧ ನಗರ ಪಾಲಿಕೆಗಳ ಆಯುಕ್ತರು, ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಮೆಟ್ರೋ, ಡಲ್ಟ್, ಕೆ-ರೈಡ್, ರೈಲ್ವೇ, ಎನ್.ಎಚ್.ಎ.ಐ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




