ನಂದಿನಿ ಬ್ರ್ಯಾಂಡ್‌ನ ಉತ್ಪನ್ನ ತಿಂದರೆ ಕ್ಯಾನ್ಸರ್ ಬರುತ್ತದೆ ಎನ್ನುವ ಸುದ್ದಿ ಶುದ್ಧ ಸುಳ್ಳು ಎಂದು ಕೆಎಂಎಫ್ (KMF) ವ್ಯವಸ್ಥಾಪಕ ನಿರ್ದೇಶಕ ಬಿ.ಶಿವಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನಂದಿನಿ ಬ್ರ್ಯಾಂಡ್‌ನ ಉತ್ಪನ್ನ ತಿಂದರೆ ಕ್ಯಾನ್ಸರ್ ಬರುತ್ತೆ ಅಂತಾ ಡಾ.ಶರಣ್ಯ ಸಂತೋಷ್ ಎಂಬುವವರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಹೀಗಾಗಿ ಜನರಲ್ಲಿ ಆತಂಕ ಸೃಷ್ಟಿ ಆಗಿದೆ. ಈ ಕುರಿತು ಸ್ಪಷ್ಟನೆ ನೀಡುರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಕೆಎಂಎಫ್ ಉತ್ಪನ್ನ ನೈಸರ್ಗಿಕವಾಗಿ ತಯಾರಿಸುತ್ತಿದ್ದೇವೆ. ಇದುವರೆಗೂ ಕೆಎಂಎಫ್ ಉತ್ಪನ್ನಗಳ ಬಗ್ಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು. ಕೆಎಂಎಫ್ ಉತ್ಪನ್ನಗಳಿಗೆ ಯಾವುದೇ ಕೆಮಿಕಲ್ ಹಾಕಲ್ಲ ಎಂದರು.
ಈಗಾಗಲೇ ಡಾ. ಶರಣ್ಯ ಸಂತೋಷ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೆಎಂಎಫ್ ಉತ್ಪನ್ನಗಳ ಬಗ್ಗೆ ಇದೇ ರೀತಿ ಅಪಪ್ರಚಾರ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಮ್ಮ ಉತ್ಪನ್ನಗಳು ಸಂಪೂರ್ಣ ಸುರಕ್ಷಿತ. ಗ್ರಾಹಕರು ಯಾವುದೇ ಆತಂಕವಿಲ್ಲದೆ ಬಳಸಬಹುದು ಎಂದು ಮನವಿ ಮಾಡಿದ್ದಾರೆ.
ಆರೋಗ್ಯ ಇಲಾಖೆಯ ವರದಿ
ಅಪಪ್ರಚಾರದ ಹಿನ್ನೆಲೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಪರೀಕ್ಷೆ ನಡೆಸಲಾಗಿದೆ. ವರದಿಯ ಪ್ರಕಾರ ಕೆಎಂಎಫ್‌ನ ಎಲ್ಲಾ ಉತ್ಪನ್ನಗಳು ಸುರಕ್ಷಿತವಾಗಿವೆ. ಮೈಸೂರು ಪಾಕ್, ಮಿಲ್ಕ್ ಪೇಡಾ, ಪನ್ನೀರ್, ವೆನಿಲಾ ಮಿಲ್ಕ್ ಶೇಕ್ ಸೇರಿದಂತೆ ಎಲ್ಲಾ ಉತ್ಪನ್ನಗಳು ಮಾನದಂಡಗಳಿಗೆ ಅನುಗುಣವಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಅಪಪ್ರಚಾರ ಮಾಡಿದವರ ವಿರುದ್ಧ ಕೆಎಂಎಫ್ ಕಾನೂನು ಕ್ರಮ
ನಂದಿನಿ ಬ್ರಾಂಡ್‌ನ ಕೆಲವು ಉತ್ಪನ್ನಗಳ ಕುರಿತು ಆಧಾರ ರಹಿತ ಆರೋಪಗಳನ್ನು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಕೆಎಂಎಫ್ (KMF)ಎಫ್‌ಐಆರ್ ದಾಖಲಿಸಿದೆ.
ನಂದಿನಿ ಉತ್ಪನ್ನಗಳನ್ನು ಉಪಯೋಗಿಸಿದರೇ ಕ್ಯಾನ್ಸರ್ ಬರುತ್ತದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಈ ಕುರಿತು ಕೆಎಂಎಫ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದು ತೀವ್ರವಾಗಿ ಖಂಡಿಸಿದೆ.
ಎಕ್ಸ್‌ನಲ್ಲಿ ಏನಿದೆ?
ನಂದಿನಿ ಬ್ರಾಂಡ್‌ನ ಕೆಲವು ಉತ್ಪನ್ನಗಳ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಆಧಾರರಹಿತ ಆರೋಪಗಳನ್ನು ಮಾಡಲಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಂದಿನಿ ಉತ್ಪನ್ನಗಳನ್ನು ಸೇವನೆಗೆ ಅಸುರಕ್ಷಿತವೆಂದು ತಪ್ಪಾಗಿ ಪ್ರಚಾರ ಮಾಡಲಾಗುತ್ತಿದ್ದು, ಬಾಲ್ಕದಿಂದಲೇ ನಂದಿನಿ ಬ್ರಾಂಡ್‌ನೊಂದಿಗೆ ಬೆಳೆದಿರುವ ಕೋಟ್ಯಾಂತರ ಗ್ರಾಹಕರಲ್ಲಿ ಅನಗತ್ಯ ಗೊಂದಲ ಉಂಟುಮಾಡಲಾಗಿದೆ.
ಕರ್ನಾಟಕ ಹಾಲು ಮಹಾಮಂಡಳಿಯು ಆಧಾರರಹಿತ, ತಪ್ಪು ದಾರಿಗೆಳೆಯುವ ಮತ್ತು ಬ್ಯಾಂಡ್‌ನ ಮಾನಹಾನಿಕರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತಿದ್ದು, ಇಂತಹ ದುರುದ್ದೇಶಪೂರಿತ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬದ್ಧವಾಗಿದೆ ಎಂದಿದೆ.




