ಅನುಕ್ಷಣ ಸುದ್ದಿ
ಬೆಂಗಳೂರು: ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ (KSBC) ಚುನಾವಣೆಯನ್ನು ಸುತ್ತುವರಿದ ಅಕ್ರಮಗಳ ಆರೋಪ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಫಲಿತಾಂಶ ಪ್ರಕಟಣೆ ತಡೆಹಿಡಿಯುವಂತೆ ಆಲ್ ಇಂಡಿಯಾ ಅಡ್ವೊಕೇಟ್ಸ್ ಅಸೋಸಿಯೇಷನ್ (AIAA) ಒತ್ತಾಯಿಸಿದೆ. ಇದೇ ವೇಳೆ, ಈ ವಿವಾದ ವಕೀಲ ವೃತ್ತಿಯ ನೈತಿಕತೆ ಮತ್ತು ಗೌರವದ ಮೇಲೆಯೇ ಪ್ರಶ್ನೆ ಎಬ್ಬಿಸಿದೆ.
ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಭಕ್ತವಚಲ, ಏಪ್ರಿಲ್ 8ರಿಂದಲೇ ಮತ ಎಣಿಕೆ ಪ್ರಕ್ರಿಯೆ ನಿಲ್ಲಿಸುವಂತೆ ಆಗ್ರಹಿಸುತ್ತಿದ್ದು, ಹಲವು ವಕೀಲರು ಹೈಪವರ್ ಸಮಿತಿಗೆ ದೂರುಗಳನ್ನು ಸಲ್ಲಿಸಿರುವುದಾಗಿ ತಿಳಿಸಿದರು. ಚುನಾವಣಾ ದಿನ ಮತಗಟ್ಟೆಗಳ ಸುತ್ತಮುತ್ತ ಅಕ್ರಮಗಳು ನಡೆದಿರುವುದಾಗಿ ದೂರಿದ್ದು, ದೂರುಗಳನ್ನು ಸ್ವೀಕರಿಸಿದರೂ ಸಮರ್ಪಕ ಕ್ರಮ ಕೈಗೊಳ್ಳದೇ ಸಮಿತಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.
ಪ್ರಧಾನ ಕಾರ್ಯದರ್ಶಿ ಎಂ. ಮುನಿಯಪ್ಪ ಮಾತನಾಡಿ, “ಚುನಾವಣಾ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಅಥವಾ ಫಲಿತಾಂಶ ಪ್ರಕಟಣೆ ತಡೆಹಿಡಿಯಬೇಕು. ಇಲ್ಲವಾದರೆ ನ್ಯಾಯಾಂಗ ಕ್ಷೇತ್ರದ ಮೇಲೆ ಸಮಾಜದಲ್ಲಿ ತಪ್ಪು ಸಂದೇಶ ಹೋಗಲಿದೆ” ಎಂದು ಎಚ್ಚರಿಸಿದರು. ಕಾನೂನು ವ್ಯವಸ್ಥೆಯ ವಿಶ್ವಾಸಾರ್ಹತೆ ಕಾಪಾಡುವುದು ಅತ್ಯಂತ ಮುಖ್ಯವಾಗಿದ್ದು, ಬಡ ಜನತೆಗೆ ನ್ಯಾಯ ಒದಗಿಸುವ ಸಂಸ್ಥೆಯೇ ಅಕ್ರಮಗಳಿಗೆ ವೇದಿಕೆಯಾಗಿರುವುದು ಆತಂಕಕಾರಿ ಎಂದರು.
ಹೈಪವರ್ ಸಮಿತಿ ಮತ್ತು ಕೆಲವು ಅಭ್ಯರ್ಥಿಗಳು/ಸ್ವಯಂಸೇವಕರ ನಡುವೆ ನಂಟು ಇರುವ ಸಾಧ್ಯತೆಯನ್ನೂ ಭಕ್ತವಚಲ ವ್ಯಕ್ತಪಡಿಸಿ, ಪೂರ್ಣ ಮತ್ತು ನ್ಯಾಯಸಮ್ಮತ ತನಿಖೆ ನಡೆಯುವವರೆಗೆ ಮತ ಎಣಿಕೆ ನಿಲ್ಲಿಸಿ ಫಲಿತಾಂಶ ಪ್ರಕಟಿಸಬಾರದು ಎಂದು ಒತ್ತಾಯಿಸಿದರು.
ಅಭ್ಯರ್ಥಿಗಳ ಗಂಭೀರ ಆರೋಪಗಳು
ರಾಜ್ಯ ವಕೀಲ ಪರಿಷತ್ ಚುನಾವಣಾ ಅಭ್ಯರ್ಥಿ ರಾಮಮೂರ್ತಿ ಮಾತನಾಡಿ, ಚುನಾವಣೆಯಲ್ಲಿ ರಿಗ್ಗಿಂಗ್ ನಡೆದಿದ್ದು, ಮತಪತ್ರದಲ್ಲಿನ ಇಂಕ್ ಮತ್ತು ಕೈಬರಹದಲ್ಲಿ ಬದಲಾವಣೆ ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೆ ಸತ್ಯ ಬಹಿರಂಗವಾಗಲಿದೆ ಎಂದರು.
ಮತ್ತೋರ್ವ ಅಭ್ಯರ್ಥಿ ಬಿ.ಜೆ.ಜಿ. ಸತ್ಯಶ್ರೀ, ಚುನಾವಣಾ ಪೂರ್ವಭಾವಿ ಸಭೆಯನ್ನು ನಡೆಸದೇ ಚುನಾವಣಾಧಿಕಾರಿಗಳು ನಿಯಮಾವಳಿಗಳ ಕುರಿತು ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆಯಿದೆ ಎಂದು ಹೇಳಿದರು.
ಸಂಧ್ಯಾ ಯು. ಪ್ರಭು ಮಾತನಾಡಿ, ಅಭ್ಯರ್ಥಿಗಳು ಅಫಿಡೆವಿಟ್ ಸಲ್ಲಿಸಿ ಅಕ್ರಮಗಳಲ್ಲಿ ಭಾಗವಹಿಸಬಾರದೆಂದು ಹೇಳಿಕೊಂಡರೂ, ಅದೇ ನಿಯಮ ಉಲ್ಲಂಘನೆ ಆಗಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಡಾ. ಕೆ.ಪಿ. ವೆಂಕಟೇಶ್, ಹೆಚ್. ಸೋಮಶೇಖರಯ್ಯ, ಸೇಬಾಸ್ಟಿಯನ್ ಸ್ವಾಮಿ ಸೇರಿದಂತೆ ಹಲವು ವಕೀಲರು ಉಪಸ್ಥಿತರಿದ್ದರು.
ವೃತ್ತಿಯ ಗೌರವವೋ, ಲಾಭದ ದಾಹವೋ?
ಈ ಚುನಾವಣೆಯನ್ನು ಸುತ್ತುವರಿದ ಘಟನೆಗಳು ಕೇವಲ ಅಕ್ರಮ ಆರೋಪಗಳಲ್ಲದೆ, ವಕೀಲ ವೃತ್ತಿಯ ನೈತಿಕತೆಯ ಮೇಲೆಯೇ ಗಂಭೀರ ಪ್ರಶ್ನೆ ಎಬ್ಬಿಸಿವೆ. ಕಾನೂನು ವೃತ್ತಿ ಎಂದರೆ ಸಮಾಜದ ನ್ಯಾಯದ ಕಂಬವೆಂದು ಪರಿಗಣಿಸಲ್ಪಡುತ್ತದೆ. ಆದರೆ ಇತ್ತೀಚಿನ ಘಟನೆಗಳು ಈ ನಂಬಿಕೆಯನ್ನು ಕುಂದಿಸುವಂತಿವೆ.
ಕೆಲವು ಅಭ್ಯರ್ಥಿಗಳು ಮತ್ತು ಮತದಾರರ ನಡೆಗಳಲ್ಲಿ ಗಿಫ್ಟ್‌ಗಳು, ಲಾಭದ ಆಮಿಷಗಳು ಹಾಗೂ ವೈಯಕ್ತಿಕ ಸ್ವಾರ್ಥ ಪ್ರಾಬಲ್ಯ ಹೊಂದಿರುವುದು ಕಂಡುಬಂದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮತದಾನ ಎಂಬ ಪ್ರಜಾಪ್ರಭುತ್ವದ ಪವಿತ್ರ ಹಕ್ಕು ವಸ್ತುವಿನಂತೆ ಪರಿಗಣನೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಇದರ ನಡುವೆ, ಯಾವುದೇ ಆಮಿಷಗಳಿಗೆ ಒಳಗಾಗದೇ ಪ್ರಾಮಾಣಿಕವಾಗಿ ಪ್ರಚಾರ ನಡೆಸಿದ ಕೆಲ ಅಭ್ಯರ್ಥಿಗಳ ಪ್ರಯತ್ನಗಳಿಗೆ ತಕ್ಕ ಪ್ರತಿಫಲ ಸಿಗದೇ ನಿರಾಸೆ ಉಂಟಾಗಿದೆ. ಇದು ಕೇವಲ ವೈಯಕ್ತಿಕ ಸೋಲಲ್ಲ, ವ್ಯವಸ್ಥೆಯಲ್ಲಿನ ದೋಷದ ಸೂಚನೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.




