ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಜಕ್ಕೂರು ಕೆರೆ ಕೋಡಿ ಪ್ರದೇಶದಲ್ಲಿ ಸ್ಥಳ ವೀಕ್ಷಣೆ ನಡೆಸಿ, ಹೊಸ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ.
ಜಕ್ಕೂರು ಕೆರೆ ಕೋಡಿ ಪಕ್ಕದ ಪ್ರದೇಶದಲ್ಲಿ 18 ಮೀಟರ್ (60 ಅಡಿ) ಅಗಲದ ಹೊಸ ರಸ್ತೆ ನಿರ್ಮಾಣ ಯೋಜನೆ ಕೈಗೊಳ್ಳಲಾಗುತ್ತಿದೆ. ಈ ರಸ್ತೆ ಕೋಗಿಲು ರಸ್ತೆಯಿಂದ ಪ್ರಾರಂಭವಾಗಿ ಸಂಪಿಗೆಹಳ್ಳಿ, ಜಕ್ಕೂರು ಹಾಗೂ ಗಸ್ತಿ ಕೆಂಪನಹಳ್ಳಿ ಮೂಲಕ ಸಾಗುತ್ತಾ, ಜಕ್ಕೂರು ಕೆರೆ ಕೋಡಿ ಮುಂಭಾಗದಿಂದ ರೈಲ್ವೆ ಸಮಾನಾಂತರ ರಸ್ತೆಯವರೆಗೆ ಸುಮಾರು 3365 ಮೀಟರ್ ಉದ್ದದಲ್ಲಿ ಸಂಪರ್ಕ ಕಲ್ಪಿಸಲಿದೆ.
ಅಲೈನ್‌ಮೆಂಟ್ ಪರಿಷ್ಕರಣೆ ಅಗತ್ಯ
ಯೋಜನೆಗೆ ಸಂಬಂಧಿಸಿದಂತೆ RMP–2015 ಅನ್ವಯ ಭೂಸ್ವಾಧೀನ ಪ್ರಕ್ರಿಯೆಗೆ ಫಾರ್ಮ್-1 ಅಧಿಸೂಚನೆ ಈಗಾಗಲೇ ಹೊರಡಿಸಲಾಗಿದೆ. ಆದರೆ, ಯೋಜಿತ ಅಲೈನ್‌ಮೆಂಟ್ ಪ್ರದೇಶದಲ್ಲಿ ಹಲವು ಮನೆಗಳು ನಿರ್ಮಾಣಗೊಂಡಿರುವುದರಿಂದ ರಸ್ತೆ ಮಾರ್ಗವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹೊಸ ಯೋಜನೆಗೆ ತಾಂತ್ರಿಕ ಕ್ರಮ
ಪ್ರಸ್ತುತ ಬಳಕೆಯಲ್ಲಿರುವ 15 ಮೀಟರ್ ರಸ್ತೆಗೆ ಹೊಂದುವಂತೆ ಹೊಸ RMP ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ, ಜಕ್ಕೂರು ಕೆರೆಯ ಬಫರ್ ವಲಯದ ಅಂಚಿನಲ್ಲಿ ಪರಿಷ್ಕೃತ ಅಲೈನ್‌ಮೆಂಟ್‌ಗೆ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ B-SMILE ಅಭಿಯಂತರರಿಂದ ಅಲೈನ್‌ಮೆಂಟ್ ನಕ್ಷೆ ಮತ್ತು ಸಂಪೂರ್ಣ ಕಡತ ಪಡೆದು ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ.
ಭೂಮಾಲೀಕರ ಸಹಕಾರ
ಪರಿಷ್ಕೃತ ಅಲೈನ್‌ಮೆಂಟ್ ಪ್ರಕಾರ, ಭೂಮಾಲೀಕರು ಟಿಡಿಆರ್ (Transferable Development Rights) ಪರಿಹಾರ ಪಡೆದು ರಸ್ತೆ ನಿರ್ಮಾಣಕ್ಕೆ ಭೂಮಿಯನ್ನು ಒದಗಿಸಲು ಆಸಕ್ತಿ ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.
ಕಾಮಗಾರಿ ವಿವರಗಳು
2024–25ನೇ ಸಾಲಿನ ಆಯವ್ಯದಲ್ಲಿ ರೂ. 5 ಕೋಟಿ ಅನುದಾನ ಮೀಸಲಿರಿಸಲಾಗಿದ್ದು, B-SMILE ವತಿಯಿಂದ ಕಾರ್ಯದೇಶ ನೀಡಲಾಗಿದೆ. ರೈಲ್ವೆ ಸಮಾನಾಂತರ ರಸ್ತೆಯಿಂದ ಪ್ರಾರಂಭವಾಗಿ, ಭೂಮಾಲೀಕರ ಸಹಮತಿ ಪಡೆದ ಭಾಗಗಳಲ್ಲಿ ಹಾಗೂ ಮಳೆನೀರು ಕಾಲುವೆ ದಾಟುವ ಸ್ಥಳದಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಪರಿಷ್ಕೃತ ಅಲೈನ್‌ಮೆಂಟ್‌ಗೆ ಅನುಮೋದನೆ ದೊರೆತು, ಟಿಡಿಆರ್ ಪರಿಹಾರ ವಿತರಣೆ ಬಳಿಕ ಉಳಿದ ಭಾಗಗಳಲ್ಲಿಯೂ ರಸ್ತೆ ಕಾಮಗಾರಿ ಕೈಗೊಳ್ಳಲಾಗುತ್ತದೆ.
ಟ್ರಾಫಿಕ್ ಸಮಸ್ಯೆಗೆ ಪರಿಹಾರ
ಈ ಯೋಜನೆ ಪೂರ್ಣಗೊಂಡ ನಂತರ, 60 ಅಡಿ ಅಗಲದ ಹೊಸ ರಸ್ತೆ ನಿರ್ಮಾಣವಾಗಲಿದ್ದು, ಸಂಚಾರ ಸುಗಮವಾಗುವುದರ ಜೊತೆಗೆ ಸುತ್ತಮುತ್ತಲಿನ ರಸ್ತೆಗಳ ಮೇಲೆ ಇರುವ ಟ್ರಾಫಿಕ್ ಒತ್ತಡವೂ ಗಮನಾರ್ಹವಾಗಿ ಕಡಿಮೆಯಾಗಲಿದೆ.
ಈ ಸಂದರ್ಭದಲ್ಲಿ ಜಂಟಿ ಆಯುಕ್ತ ಮೊಹಮ್ಮದ್ ನಯೀಮ್ ಮೊಮಿನ್, ಮುಖ್ಯ ಅಭಿಯಂತರ ರಾಘವೇಂದ್ರ ಪ್ರಸಾದ್, ಅಧೀಕ್ಷಕ ಅಭಿಯಂತರ ಪ್ರಕಾಶ್, ಕಾರ್ಯಪಾಲಕ ಅಭಿಯಂತರ ಸಚಿನ್ ಹಾಗೂ B-SMILE ಅಭಿಯಂತರ ಪ್ರಕಾಶ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.




