ಬೆಂಗಳೂರು: ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಸ್ಮರಣಾರ್ಥ ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ‘ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ’ ಆಯೋಜಿಸಲಾಗಿದೆ.
ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ನಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 25 ಸಾವಿರಕ್ಕೂ ಹೆಚ್ಚು ವಿಷ್ಣುವರ್ಧನ್ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಡಾ. ವಿಷ್ಣುವರ್ಧನ್ ಅವರೊಂದಿಗೆ ಕೆಲಸ ಮಾಡಿದ ನಟರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದ ಪ್ರಮುಖರೂ ಭಾಗವಹಿಸುವ ನಿರೀಕ್ಷೆಯಿದೆ.
ಕಾರ್ಯಕ್ರಮದ ಕುರಿತು ಮಾತನಾಡಿದ ವೀರಕಪುತ್ರ ಶ್ರೀನಿವಾಸ್, ಇದು ಕೇವಲ ವಿಷ್ಣುವರ್ಧನ್ ಅವರ ಜನ್ಮದಿನವನ್ನು ಆಚರಿಸುವ ಕಾರ್ಯಕ್ರಮವಲ್ಲ; ಅವರ ಸಿನಿಮಾ ಸಾಧನೆ, ವ್ಯಕ್ತಿತ್ವ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನವೂ ಆಗಿದೆ ಎಂದು ತಿಳಿಸಿದ್ದಾರೆ.
ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಡಾ. ವಿಷ್ಣುವರ್ಧನ್ ಅವರ ಜೀವನ, ಚಿತ್ರಯಾನ, ಸಾಧನೆ ಹಾಗೂ ಸ್ಮರಣೀಯ ಚಿತ್ರಗಳ ಕುರಿತ ವಿಶೇಷ ಕಾರ್ಯಕ್ರಮಗಳು ಇರಲಿವೆ. ಅವರೊಂದಿಗೆ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನವನ್ನೂ ಆಯೋಜಕರು ನಡೆಸುತ್ತಿದ್ದಾರೆ.
ಹಿರಿಯ ನಿರ್ದೇಶಕ ಡಾ. ರಾಜೇಂದ್ರ ಸಿಂಗ್ ಬಾಬು, ವಿಷ್ಣುವರ್ಧನ್ ಅವರ ನೆನಪು ಮತ್ತು ಸಾಧನೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿವೆ ಎಂದು ಹೇಳಿದ್ದಾರೆ.
ನಟ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಸುಂದರ್ ರಾಜ್, ಅಮೃತ ಮಹೋತ್ಸವದಲ್ಲಿ ಕನ್ನಡ ಚಿತ್ರರಂಗದ ಹೆಚ್ಚಿನ ಕಲಾವಿದರು ಹಾಗೂ ತಂತ್ರಜ್ಞರನ್ನು ಭಾಗಿಯಾಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ‘ಡಾ. ವಿಷ್ಣುವರ್ಧನ್ ಅಮೃತ ಮಹೋತ್ಸವ’ದ ಅಧಿಕೃತ ಲೋಗೋವನ್ನು ಅನಾವರಣಗೊಳಿಸಲಾಗಿದೆ. ಸಾಹಸಸಿಂಹನ ಸ್ಮರಣೆಯಲ್ಲಿ ನಡೆಯಲಿರುವ ಈ ಮಹೋತ್ಸವವು ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರ ದೊಡ್ಡ ಸಂಗಮವಾಗಲಿದೆ.
No ratings yet











