ಅಲ್ಪಸಂಖ್ಯಾತರ ಕೌಶಲ್ಯ, ಸಂಸ್ಕೃತಿ ಅನಾವರಣಕ್ಕೆ ‘ಕರ್ನಾಟಕ ಪರ್ವ’ 26ರಿಂದ 30ರವರೆಗೆ ತ್ರಿಪುರವಾಸಿನಿಯಲ್ಲಿ ಐದು ದಿನಗಳ ಕಾರ್ಯಕ್ರಮ
2min read
ಬೆಂಗಳೂರು:
ಅಲ್ಪಸಂಖ್ಯಾತ ಸಮುದಾಯಗಳಲ್ಲಿರುವ ಕೌಶಲ್ಯ, ಕರಕುಶಲ ಪ್ರತಿಭೆ, ಉದ್ಯಮಶೀಲತೆ ಮತ್ತು ಸಾಂಸ್ಕೃತಿಕ ವೈಭವವನ್ನು ಪರಿಚಯಿಸುವ ಉದ್ದೇಶದಿಂದ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ‘ಕರ್ನಾಟಕ ಪರ್ವ-2026’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಐದು ದಿನಗಳ ಕಾರ್ಯಕ್ರಮವು ಸೆಪ್ಟೆಂಬರ್ 26ರಿಂದ 30ರವರೆಗೆ ಬೆಂಗಳೂರಿನ ಪ್ಯಾಲೆಸ್ ಮೈದಾನದ ತ್ರಿಪುರವಾಸಿನಿ ಹಾಲ್ನಲ್ಲಿ ನಡೆಯಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಆರ್ಟಿಸನ್ಗಳು (ಕರಕುಶಲ ಕಲಾವಿದರು), ಉದ್ಯಮಿಗಳು ಮತ್ತು ಪ್ರತಿಭಾವಂತರಿಗೆ ತಮ್ಮ ಉತ್ಪನ್ನ ಹಾಗೂ ಕೌಶಲ್ಯ ಪ್ರದರ್ಶಿಸಲು ವೇದಿಕೆ ಒದಗಿಸಲಾಗುವುದು. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಮುಂದಿನ ದಿನಗಳಲ್ಲಿ ಉದ್ಯಮಿಗಳಾಗಿ ಬೆಳೆಯಲು ಅಗತ್ಯ ಮಾರ್ಗದರ್ಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.
180 ಕರಕುಶಲ ಮಳಿಗೆಗಳು, ಆಹಾರ ಉತ್ಸವ
‘ಕರ್ನಾಟಕ ಪರ್ವ’ದಲ್ಲಿ ಸುಮಾರು 180 ಕರಕುಶಲ ಮಳಿಗೆಗಳನ್ನು ಸ್ಥಾಪಿಸಲಾಗುವುದು. ವಿವಿಧ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಆಯ್ಕೆಯಾದ ಕರಕುಶಲ ಕಲಾವಿದರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ. ವ್ಯಾಪಾರಿಗಳಿಗೆ ಅಲ್ಲ, ನೇರವಾಗಿ ಕಲಾವಿದರಿಗೆ ಅವಕಾಶ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಇದರ ಜೊತೆಗೆ ಅಲ್ಪಸಂಖ್ಯಾತ ಸಮುದಾಯಗಳ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಫುಡ್ ಫೆಸ್ಟಿವಲ್ ಕೂಡ ನಡೆಯಲಿದೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಪಾರ್ಸಿ ಹಾಗೂ ಬೌದ್ಧ ಸಮುದಾಯಗಳ ಆಹಾರ ಪದ್ಧತಿಗಳ ಜೊತೆಗೆ ಕರ್ನಾಟಕದ ವಿವಿಧ ಭಾಗಗಳ ಸಾಂಪ್ರದಾಯಿಕ ಆಹಾರಗಳು ಇಲ್ಲಿ ಲಭ್ಯವಾಗಲಿವೆ.
ಸಾಂಸ್ಕೃತಿಕ ಕಾರ್ಯಕ್ರಮ, ಚರ್ಚೆಗಳು
ಐದು ದಿನಗಳ ಕಾಲ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ಕೌಶಲ್ಯ, ಉದ್ಯಮಶೀಲತೆ ಮತ್ತು ಸಂಸ್ಕೃತಿ ಕುರಿತ ಪ್ಯಾನೆಲ್ ಚರ್ಚೆಗಳು ನಡೆಯಲಿವೆ. ಸ್ಥಳೀಯ ಕಲಾವಿದರಿಗೂ ವೇದಿಕೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆ ಸೆಪ್ಟೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಪ್ರವೇಶ ಉಚಿತ
‘ಕರ್ನಾಟಕ ಪರ್ವ’ಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರಲಿದೆ. ಜನರು ಕುಟುಂಬ ಸಮೇತರಾಗಿ ಆಗಮಿಸಿ ವಿವಿಧ ಸಂಸ್ಕೃತಿ, ಕಲೆ ಮತ್ತು ಉತ್ಪನ್ನಗಳನ್ನು ವೀಕ್ಷಿಸಬಹುದು ಎಂದು ಸಚಿವರು ಮನವಿ ಮಾಡಿದರು.
ಉದ್ಯಮ ಆರಂಭಕ್ಕೆ ನೆರವು
ಪ್ರತಿಭೆ ಇದ್ದರೂ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರಿಗೆ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಗುವುದು. ಕೆಎಂಡಿಸಿ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ಸಾಲ, ತರಬೇತಿ ಮತ್ತು ಉದ್ಯಮ ಆರಂಭಿಸಲು ನೆರವು ದೊರೆಯಲಿದೆ ಎಂದು ಸಚಿವರು ಹೇಳಿದರು.
ಡಿಜಿಟಲ್ ಮಾರುಕಟ್ಟೆ, ಆನ್ಲೈನ್ ಮಾರಾಟ ಮತ್ತು ಉತ್ಪನ್ನಗಳ ಪ್ರಚಾರದ ಕುರಿತು ಕೂಡ ಅರಿವು ಮೂಡಿಸಲಾಗುವುದು. ಸಣ್ಣ ಕಲಾವಿದರ ಉತ್ಪನ್ನಗಳು ದೊಡ್ಡ ಮಾರುಕಟ್ಟೆ ತಲುಪಲು ಸಹಕಾರ ನೀಡುವುದು ಇಲಾಖೆಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
"ಎಲ್ಲರಿಗೂ ಮುಕ್ತವಾದ ಸಾಂಸ್ಕೃತಿಕ ವೇದಿಕೆ"
“ಈ ಕಾರ್ಯಕ್ರಮ ಅಲ್ಪಸಂಖ್ಯಾತರಿಗಷ್ಟೇ ಸೀಮಿತವಲ್ಲ. ಎಲ್ಲಾ ಜಾತಿ, ಧರ್ಮದ ಜನರು ಭಾಗವಹಿಸಿ ನಮ್ಮ ಸಂಸ್ಕೃತಿ, ಪ್ರತಿಭೆ ಮತ್ತು ವೈವಿಧ್ಯತೆಯನ್ನು ಅರಿಯುವ ಅವಕಾಶ ಪಡೆಯಬೇಕು” ಎಂದು ಯು.ಟಿ. ಖಾದರ್ ಹೇಳಿದರು.
ವಿಜಯ ಪ್ರಕಾಶ್ ಸೇರಿದಂತೆ ಹಲವು ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಐದು ದಿನಗಳ ಕಾಲ ಸಾರ್ವಜನಿಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶ ಹೊಂದಲಾಗಿದೆ.
No ratings yet











