ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಿಮ್ಯಾನ್ಸ್ ಸಹಯೋಗದಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಅತಿಯಾದ ಹಾಗೂ ಅಸುರಕ್ಷಿತ ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ನಿಯಂತ್ರಿಸಲು ಸಮಗ್ರ ನೀತಿಯನ್ನು ಪ್ರಸ್ತಾಪಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪ್ರತಿ ನಾಲ್ಕು ಮಕ್ಕಳಲ್ಲಿ ಒಬ್ಬರಿಗೆ ಹೆಚ್ಚಾದ ಇಂಟರ್‌ನೆಟ್ ಬಳಕೆಯ ಸಮಸ್ಯೆಗಳ ಲಕ್ಷಣಗಳು ಕಾಣಿಸುತ್ತಿರುವ ಹಿನ್ನೆಲೆ, ಈ ನೀತಿಯಲ್ಲಿ ಹೆಚ್ಚು ಸಮಯದ ಸ್ಕ್ರೀನ್ ಬಳಕೆಯಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳಾದ ಆತಂಕ, ನಿದ್ರೆ ಸಮಸ್ಯೆ, ಕಡಿಮೆ ಶೈಕ್ಷಣಿಕ ಕಾರ್ಯಕ್ಷಮತೆ ಮತ್ತು ಸಾಮಾಜಿಕ ಪ್ರತ್ಯೇಕತೆ (Social Isolation) ಮುಂತಾದವುಗಳನ್ನು ಗುರುತಿಸಲಾಗಿದೆ. ಜೊತೆಗೆ, ಆನ್‌ಲೈನ್ ಕಿರುಕುಳ, ಮೋಸ ಹಾಗೂ ದುರುಪಯೋಗ ಸೇರಿದಂತೆ ಸೈಬರ್ ಅಪಾಯಗಳನ್ನೂ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ಪ್ರಮುಖ ಉದ್ದೇಶ:
ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ, ಭಾವನಾತ್ಮಕ ಸಮತೋಲನ ಹಾಗೂ ಡಿಜಿಟಲ್ ವೆಲ್‌ಬೀಯಿಂಗ್ ಅನ್ನು ಶಾಲಾ ಆಧಾರಿತ ವ್ಯವಸ್ಥೆಯ ಮೂಲಕ ಉತ್ತೇಜಿಸುವುದು.
ನೀತಿಯ ವಿಧಾನ:
ಈ ನೀತಿಯು ತಡೆಗಟ್ಟುವಿಕೆ, ಆರಂಭಿಕ ಗುರುತಿಸುವಿಕೆ ಮತ್ತು ಸಮರ್ಪಕ ನಿರ್ವಹಣೆ ಎಂಬ ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ಡಿಜಿಟಲ್ ತಿಳುವಳಿಕೆ, ಮಾನಸಿಕ ಆರೋಗ್ಯ ಪ್ರೋತ್ಸಾಹ ಹಾಗೂ ಸೈಬರ್ ಸುರಕ್ಷತೆಯನ್ನು ಶಾಲಾ ವ್ಯವಸ್ಥೆಯೊಂದಿಗೆ ಸಮನ್ವಯಗೊಳಿಸಲಾಗಿದೆ. ಶಾಲೆಗಳು, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಸರ್ಕಾರದ ಸಕ್ರಿಯ ಪಾಲ್ಗೊಳ್ಳುವಿಕೆಗೂ ಒತ್ತು ನೀಡಲಾಗಿದೆ.
ಪ್ರಮುಖ ನಿರ್ದೇಶನಗಳು:
ರಾಜ್ಯ ಸರ್ಕಾರವು ಶಾಲೆಗಳಿಗೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲಿದ್ದು, ಶಿಕ್ಷಕರಿಗೆ ತಂತ್ರಜ್ಞಾನವನ್ನು ಆರೋಗ್ಯಕರವಾಗಿ ಬಳಸುವ ಕುರಿತು ತರಬೇತಿ ನೀಡಲಾಗುತ್ತದೆ. ಪೋಷಕರಿಗೂ ಶಾಲೆಗಳ ಮೂಲಕ ಅಗತ್ಯ ಮಾಹಿತಿಯನ್ನು ಹಂಚಲಾಗುತ್ತದೆ.
ನೀತಿ ಕ್ರಮಗಳು:
ಪಠ್ಯಕ್ರಮದಲ್ಲಿ ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ, ಜೀವನ ಕೌಶಲ್ಯ ಹಾಗೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ವಿಷಯಗಳನ್ನು ಸೇರಿಸಲಾಗುತ್ತದೆ. ಶಾಲೆಗಳಲ್ಲಿ ಡಿಜಿಟಲ್ ಬಳಕೆ ನೀತಿಯನ್ನು ಜಾರಿಗೊಳಿಸಿ, ಮನರಂಜನಾ ತಂತ್ರಜ್ಞಾನ ಬಳಕೆಗೆ ಮಿತಿಯನ್ನು ವಿಧಿಸುವುದು, ಸೈಬರ್ ದುರ್ವ್ಯವಹಾರಗಳನ್ನು ನಿರ್ವಹಿಸುವುದು ಹಾಗೂ ಸಲಹಾ ಸೇವೆಗಳನ್ನು ಒದಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.
ವಿದ್ಯಾರ್ಥಿಗಳ ವರ್ತನೆ ಮತ್ತು ಶೈಕ್ಷಣಿಕ ಸಮಸ್ಯೆಗಳ ಆರಂಭಿಕ ಗುರುತಿಸುವಿಕೆಗೆ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ. ಅಗತ್ಯವಿದ್ದರೆ, ವಿದ್ಯಾರ್ಥಿಗಳನ್ನು ಕೌನ್ಸೆಲರ್‌ಗಳು ಮತ್ತು ಮಾನಸಿಕ ಆರೋಗ್ಯ ಸೇವೆಗಳತ್ತ ರೆಫರ್ ಮಾಡುವ ವ್ಯವಸ್ಥೆಯೂ ಇರುತ್ತದೆ.
ಶಾಲಾ ಮಟ್ಟದಲ್ಲಿ ಜವಾಬ್ದಾರಿಯುತ ತಂತ್ರಜ್ಞಾನ ಬಳಕೆ ಸಮಿತಿಗಳನ್ನು ರಚಿಸಿ ಅನುಷ್ಠಾನ, ಜಾಗೃತಿ ಮತ್ತು ಘಟನೆ ನಿರ್ವಹಣೆಗೆ ಒತ್ತು ನೀಡಲಾಗುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ನಿಯಮಿತವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಇದರ ಜೊತೆಗೆ, ದೈಹಿಕ ಚಟುವಟಿಕೆಗಳು, ಹವ್ಯಾಸಗಳು ಮತ್ತು “ತಂತ್ರಜ್ಞಾನೇತರ” ಅವಧಿಗಳನ್ನು ಉತ್ತೇಜಿಸುವ ಮೂಲಕ ಆಫ್‌ಲೈನ್ ಚಟುವಟಿಕೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ತಂತ್ರಜ್ಞಾನ ಬಳಕೆಯ ಒತ್ತಡವನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆಯೂ ಜಾರಿಗೊಳ್ಳಲಿದೆ.
ಶಿಕ್ಷಕರ ತರಬೇತಿ:
ಡಿಜಿಟಲ್ ಡಿಟಾಕ್ಸ್ ಮಾದರಿಯಡಿ ‘ಟ್ರೈನಿಂಗ್ ಆಫ್ ಟ್ರೈನರ್ಸ್’ (ToT) ಮೂಲಕ ಶಿಕ್ಷಕರಿಗೆ ತಂತ್ರಜ್ಞಾನ ವ್ಯಸನದ ಲಕ್ಷಣಗಳು—ಆಕರ್ಷಣೆ (Craving), ನಿಯಂತ್ರಣ ಕೊರತೆ (Control), ಬಲವಂತದ ಬಳಕೆ (Compulsion), ಎದುರಿಸಿಕೊಳ್ಳುವ ವಿಧಾನ (Coping) ಮತ್ತು ಪರಿಣಾಮಗಳು (Consequences)—ಗುರುತಿಸುವ ತರಬೇತಿ ನೀಡಲಾಗುತ್ತದೆ. ಜೊತೆಗೆ, ತರಗತಿ ಮಟ್ಟದಲ್ಲಿ ಸಹಪಾಠಿಗಳಿಂದ ಮುನ್ನಡೆಸುವ ಕಾರ್ಯಕ್ರಮಗಳನ್ನು ನಡೆಸಲು ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತದೆ.




