ಬೆಂಗಳೂರು: ವೈಜ್ಞಾನಿಕ ವರದಿ ಇಲ್ಲದೆ ಒಳಮೀಸಲಾತಿಯನ್ನು ಜಾರಿಗೊಳಿಸುವ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿ ಕೆ ಪೂಜಾರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, “ಈಗಾಗಲೇ ಒಳಮೀಸಲಾತಿಯಲ್ಲಿ ನಿಗದಿಯಾಗಿರುವ ಪ್ರವರ್ಗ ‘ಬಿ’ ಮತ್ತು ‘ಸಿ’ಗಳಿಗೆ ಭರಿಸಲಾಗದ ನಷ್ಟ ಉಂಟಾಗಿದೆ. ಇದು ನಮ್ಮಲ್ಲಿ ಗಂಭೀರ ಆತಂಕವನ್ನು ಉಂಟುಮಾಡಿದೆ” ಎಂದರು.
“ಸರ್ಕಾರ ಹೊರಡಿಸಿರುವ ಒಳಮೀಸಲಾತಿಯ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಸರಿಯಾದ ಅಂಕಿಅಂಶಗಳನ್ನು ಪರಿಗಣಿಸದೆ ಸಚಿವ ಸಂಪುಟವು ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು,” ಎಂದು ಅವರು ಆಗ್ರಹಿಸಿದರು.
ಮುಂದುವರೆದು, “ಕೇಂದ್ರ ಸರ್ಕಾರದ ಜನಗಣತಿಯ ನಂತರ ಲಭ್ಯವಾಗುವ ಸ್ಪಷ್ಟ ಜನಸಂಖ್ಯಾ ಅಂಕಿಅಂಶಗಳ ಆಧಾರದ ಮೇಲೆ ಮಾತ್ರ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು,” ಎಂದು ಹೇಳಿದರು.
“ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ, ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು,” ಎಂದು ರವಿ ಕೆ ಪೂಜಾರ ಎಚ್ಚರಿಕೆ ನೀಡಿದರು.




